ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ತೃಪ್ತಿತಂದಿವೆ
ಶಿವಮೊಗ್ಗ: ಶಾಸಕನಾಗಿ ಕ್ಷೇತ್ರದಲ್ಲಿ ಮಾಡಿದ ಕೆಲಸ ಕಾರ್ಯಗಳು ತೃಪ್ತಿತಂದಿದೆ. ಮುಂದಿನ ಚುನಾವಣೆಗೆ ಟಿಕೆಟ್ ಸಿಕ್ಕರೆ ಕಣಕ್ಕಿಳಿಯುತ್ತೇನೆ, ಇಲ್ಲವಾದರೆ ಜೂನ್‌ನಿಂದ ಕೋಟು ಧರಿಸಿ ಕೋರ್ಟ್‌ಗೆ ಹೋಗುತ್ತೇನೆ ಎಂದು ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕನಾಗಿ ಜನರೊಂದಿಗೆ ಬೆರೆತಿದ್ದೇನೆ. ಅವರ ಆಗುಹೋಗುಗಳಲ್ಲಿ ಜೊತೆಗಿದ್ದೇನೆ. ಸದ್ಯ ಕ್ಷೇತ್ರದಲ್ಲಿ 100 ಕೋಟಿಯ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಹಿಂದೆಂದೂ ಬಾರದಷ್ಟು ಹಣ ಕ್ಷೇತ್ರದ ಅಭಿವೃದ್ಧಿಗೆ ತಂದಿರುವ ಸಂತೃಪ್ತಿ ಇದೆ ಎಂದು ಅವರು ಹೇಳಿದರು.
ನೇರ ಹಣಾಹಣಿ: ಚುನಾವಣೆ ತಯಾರಿ ಹೇಗಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇರುತ್ತದೆ. ಎರಡು ಮೂರು ತಿಂಗಳಲ್ಲಿ ಕಣಕ್ಕೆ ಬಂದು ಚುನಾವಣೆಗೆ ಪ್ರಯತ್ನಿಸಿದವರಿಗೆ ಯಶಸ್ಸು ಸಿಗುವುದಿಲ್ಲ ಎಂದರು.
ಸೀರೆ, ಹಣದಿಂದ ಗೆಲುವು ಸಾಧ್ಯವಿಲ್ಲ: ಸೀರೆ, ಹಣ ಹಂಚುವುದರಿಂದ ಫಲಿತಾಂಶ ಬದಲಾಗುತ್ತದೆಂಬುದು ತೀರ್ಥಹಳ್ಳಿ ಕ್ಷೇತ್ರದ ಪಾಲಿಗಂತೂ ಒಗ್ಗದ ಮಾತು. ಈ ಹಿಂದೆ ಚುನಾವಣಾ ಕಣದಲ್ಲಿದ್ದ ಅತ್ಯಂತ ಶ್ರೀಮಂತರಾಗಿದ್ದ ಎ.ಆರ್. ಬದರಿನಾರಾಯಣ್‌ರನ್ನು ಸೋಲಿಸಿ ಸಮಾಜವಾದಿ ಹಿನ್ನೆಲೆಯ, ಚುನಾವಣೆಗೆ ಹಣವೇ ಖರ್ಚು ಮಾಡದ ಗೋಪಾಲಗೌಡರನ್ನು ಈ ಕ್ಷೇತ್ರದ ಮತದಾರರು ಗೆಲ್ಲಿಸಿರುವುದೇ ಇದಕ್ಕೆ ಸಾಕ್ಷಿ ಎಂದು ತಿಳಿಸಿದರು. ಈ ಬಾರಿಯೂ ಕಾಂಗ್ರೆಸ್‌ನಿಂದ ತಮಗೆ ಟಿಕೆಟಟ್ಸಿಗುವ ವಿಶ್ವಾಸವಿದೆ. ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ವಕೀಲಿ ವೃತ್ತಿ ಮುಂದುವರಿಸುತ್ತೇನೆ ಎಂದು ಹೇಳಿದರು.
2 ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದ ಮತಗಳಿಂದ ಸೋಲು ಕಂಡೆ. ಕಳೆದ ಬಾರಿ ಗೆಲುವು ಸಾಧಿಸಿದೆ. ಈ ಹಿಂದಿನ ಚುನಾವಣೆಯಲ್ಲಿ ನನ್ನ ವಿರುದ್ಧ ಒಟ್ಟಾಗಿ ಮುಗಿಬಿದ್ದವರು ಈಗ ಬೇರೆ ಬೇರೆ ಪಕ್ಷಗಳಿಂದ ಕಣಕ್ಕಿಳಿದಿದ್ದಾರೆ. ಹೀಗಾಗಿ ಅವರೆಲ್ಲರ ಸ್ಪರ್ಧೆಯೇ ನನಗೆ ಲಾಭ ಎಂದರು.
1600 ಕೋಟಿ ನೀಡಿ: ಭೌಗೋಳಿಕವಾಗಿ ಅತಿ ದೊಡ್ಡ ವಿಧಾನಸಭಾ ಕ್ಷೇತ್ರವಾದ ತೀರ್ಥಹಳ್ಳಿಯಲ್ಲಿ ಅತಿ ಹೆಚ್ಚು ಗ್ರಾಮ ಪಂಚಾಯಿತಿಗಳಿವೆ. ಇಲ್ಲಿಗೆ ಸರ್ಕಾರ ಎಷ್ಟು ಹಣ ಕೊಟ್ಟರೂ ಸಾಲದು. ಕನಿಷ್ಟ 1600 ಕೋಟಿ ನೀಡಿದರೆ ಕ್ಷೇತ್ರದಲ್ಲಿನ 3500 ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿ ಪಡೆಸಬಹುದು. ಆದರೆ, ಅದು ಸಾಧ್ಯವಾಗಲಿಲ್ಲ. ಆದರೆ, ಹಿಂದಿನ ಅವಧಿಗಿಂತ ನನ್ನ ಅವಧಿಯಲ್ಲಿ ಹೆಚ್ಚು ಕೆಲಸವಾಗಿದೆ ಎಂದರು.
ನನ್ನ ವಿರುದ್ಧ ಅನಗತ್ಯ ಆರೋಪ ಕೇಳಿಬರುತ್ತಿದೆ. ದೇವನಹಳ್ಳಿಯಲ್ಲಿ ಜಮೀನು ಖರೀದಿಸಲಾಗಿದೆ ಎಂದು ಆರೋಪಿಸಲಾಗುತ್ತದೆ. ಒಂದು ವೇಳೆ ಅಲ್ಲಿ ಜಮೀನು ಇರುವ ಬಗ್ಗೆ ದಾಖಲೆ ತೋರಿಸಿದರೆ, ಆ ಜಮೀನನ್ನು ಆರೋಪ ಮಾಡಿದವರೇ ಬರೆದುಕೊಡುತ್ತೇನೆ ಎಂದು ಖಾರವಾಗಿ ಹೇಳಿದರು.