ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಠಮಾನ್ಯಗಳು ಸಂಸ್ಕಾರದ ಕೇಂದ್ರಗಳಾಗಲಿ

Rashmi Kasaragodu
Updated On : 2 Feb 2013, 11:47 am




ಭದ್ರಾವತಿ: ಮಠಮಾನ್ಯಗಳು ಗುರುಕುಲ ಪದ್ಧತಿಯಂತೆ ಮಕ್ಕಳಿಗೆ ವಿದ್ಯೆ ಮತ್ತು ಭಕ್ತರಿಗೆ ಸಂಸ್ಕಾರ, ಸಂಸ್ಕೃತಿಯನ್ನು ನೀಡುವ ಕೇಂದ್ರಗಳಾಗಬೇಕು ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
 ಅವರು ಶುಕ್ರವಾರ ಬಿಳಕಿಯಲ್ಲಿ ರಂಭಾಪುರಿ ಶಾಖಾ ಹಿರೇಮಠದ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಗುರುಸಿದ್ದೇಶ್ವರ ದಾಸೋಹ ಮಂದಿರ, ಈಶ್ವರ ಮತ್ತು ಬಸವಣ್ಣನ ದೇವಸ್ಥಾನಗಳ ಶಂಕುಸ್ಥಾಪನೆ ನೆರವೇರಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನುಮಾನದ ದೃಷ್ಟಿ: ಇಂದು ಸಂಸ್ಕೃತಿ ಮತ್ತು ಸಂಸ್ಕಾರ ನಶಿಸಿಹೋಗುತ್ತಿದೆ. ಮಠಾಧೀಶರುಗಳನ್ನು ಅನುಮಾನದ ದೃಷ್ಟಿಯಿಂದ ನೋಡುವ ಪರಿಸ್ಥಿತಿ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆದರ್ಶ ಮೌಲ್ಯಗಳನ್ನಿಟ್ಟುಕೊಂಡು ಭಕ್ತರಿಗೆ ಉತ್ತಮ ಸಂಸ್ಕಾರ ಕೊಡುವ ನಿಟ್ಟಿನಲ್ಲಿ ಬಿಳಕಿ ಶಾಖಾ ಹಿರೇಮಠ ಪ್ರಗತಿ ಹೊಂದುತ್ತಿರುವುದು ಶ್ಲಾಘನೀಯವೆಂದರು.
  ದೇಶದ ಶ್ರದ್ಧಾಕೇಂದ್ರಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇಂದು ಎಲ್ಲರ ಹೆಗಲ ಮೇಲಿದೆ. ಶಾಂತಿ  ಅರಸಿಕೊಂಡು ವಿಶ್ವವೇ ಭಾರತದತ್ತ ವಲಸೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಜಾತಿಯ ವಿಷಬೀಜ ಬಿತ್ತಿ ಕೆಲವು ಸ್ವಾರ್ಥಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಅವರ ಮುಂದೆ ಜಾತ್ಯತೀತ ಘೋಷಣೆಯನ್ನು ನಾವು ಮಾಡಬೇಕು ಎಂದು ಹೇಳಿದರು.
ಗುರುವಂದನೆ: ನಮ್ಮದು ಆಚಾರ್ಯ ದೇವೋಭವ ಎಂದು ನಂಬಿರುವ ಸಂಸ್ಕೃತಿ. ದೇವರ ನಂತರ ಗುರುಗಳನ್ನು ನಾವು ವಂದಿಸುತ್ತೇವೆ. ಬಿಳಕಿ ಸ್ವಾಮಿಗಳು ಜನರ ಪೂಜ್ಯ ಭಾವನೆಗೆ ತಕ್ಕಂತೆ ಜೀವನ ನಡೆಸುತ್ತಿದ್ದಾರೆ. ದೇಶದಲ್ಲಿ ಇಂತಹ ಮಠ ಮತ್ತು ಸಾಧುಸಂತರು ಇರುವುದರಿಂದಲೇ ಧರ್ಮ ಜೀವಂತವಾಗಿದೆ ಎಂದರು.   ಬಿಳಕಿ ಶಾಖಾ ಹಿರೇಮಠದ ಅಭಿವೃದ್ಧಿಗೆ ಒಂದು ಯೋಜನೆ ಸಿದ್ಧಪಡಿಸಿದರೆ ಅದರ ಅಭಿವೃದ್ಧಿಗೆ ತಾವು ಬದ್ಧರಾಗಿರುವುದಾಗಿ ಅವರು ಘೋಷಿಸಿದರು.
ಬಿಳಿಕಿ ಶಾಖಾ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿ ಹಾಗೂ ರಟ್ಟಿಹಳ್ಳಿಯ ಕಬ್ಬಿಣಕಂಥಿ ಮಠದ ಶ್ರಿ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು.
 ಭದ್ರಾವತಿಯ ವಾಣಿಜ್ಯೋದ್ಯಮಿ ಬಿ.ಕೆ. ಜಗನ್ನಾಥ್ ಅಧ್ಯಕ್ಷತೆ ವಹಿಸಿದ್ದರು. ಬಿಳಿಕಿ ಮಠದ ಗೌರವಾಧ್ಯಕ್ಷ ಟಿ.ವಿ. ಈಶ್ವರಪಯ್ಯ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಎಚ್.ಆರ್. ಉಮೇಶ್ ಆರಾಧ್ಯ, ಬಿಳಿಕಿ ಗ್ರಾಪಂ ಅಧ್ಯಕ್ಷೆ ಜಾಹಿದಾ ಬೇಗಂ, ಗ್ರಾಪಂ ಸದಸ್ಯರಾದ ಲಂಬೋದರ ಮತ್ತು ಶಂಕರ ನಾಯಕ್, ಅಖಿಲ ಭಾರತ ವೀರಶೈವ ಮಹಾಸಭಾದ ಭದ್ರಾವತಿ ತಾಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗಯ್ಯ, ವೀರಶೈವ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಬಾಳೆಹೊನ್ನೂರು ರಂಭಾಪುರಿ ಪೀಠದ ವ್ಯವಸ್ಥಾಪಕ ನಟರಾಜ್, ಬಿಳಿಕಿಯ ಶಂಕರಪ್ಪಗೌಡ ಪಟೇಲ್, ಕೂಡ್ಲಿಗೆರೆ ನಾಗರಾಜ್, ಮಹೇಶ್ವರಪ್ಪ, ಬಿಳಿಕಿ ಯೋಜನಾಭಿವೃದ್ಧಿ ಅಧಿಕಾರಿ ಕೇಶವಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement