ಟ್ರ್ಯಾಕ್ಟರ್- ಓಮ್ನಿ ಮುಖಾಮುಖಿ: ಮಗು ಸೇರಿ ಇಬ್ಬರ ಸಾವು
ಶಿರಾಳಕೊಪ್ಪ: ಓಮಿನಿಗೆ ಎದುರಿಂದ ಬರುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಓಮಿನಿಯಲ್ಲಿದ್ದ 7 ತಿಂಗಳ ಮಗು ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮುತ್ತಿಗೆ- ವಡ್ಡಿಗೇರಿ ಮಧ್ಯೆ ರಾತ್ರಿ 8ಗಂಟೆ ನಡೆದಿದೆ.
ಬಂಗಾರಯ್ಯ(65) ಮತ್ತು ಸೃಷ್ಟಿ (7ತಿಂಗಳು) ಮೃತರು. ಅಪಘಾತದಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದು, ಗಂಭೀರ ಗಾಯಗೊಂಡ ಮೂವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ.
ಘಟನೆ ವಿವರ: ಹಂಸಭಾವಿ ಮೂಲದ ಬಂಗಾರಯ್ಯ ಎಂಬುವರ ಕುಟುಂಬದ 6ಸದಸ್ಯರು ಶಿರಾಳಕೊಪ್ಪ ಮುಖಾಂತರ ಶಿವಮೊಗ್ಗಕ್ಕೆ ಹೋಗಿ, ಮರಳಿ ಶಿರಾಳಕೊಪ್ಪ ಮುಖಾಂತರ ಹಂಸಭಾವಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಶಿರಾಳಕೊಪ್ಪದಿಂದ 5ಕಿಮೀ ದೂರದ ವಡ್ಡಿಗೇರಿ ಮುತ್ತಿಗೆ ಮಧ್ಯೆ ಎದುರಿಗೆ ಬರುತ್ತಿದ್ದ ಟ್ರ್ಯಾಕ್ಟರ್ ಓಮ್ನಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಓಮ್ನಿಗೆ ಡಿಕ್ಕಿ ಹೊಡೆದ ಟ್ರ್ಯಾಕ್ಟರ್ ನಿಲ್ಲಿಸದೇ ಪರಾರಿಯಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಮರದಿಂದ ಬಿದ್ದು ಸಾವು
ಶಿವಮೊಗ್ಗ: ಮರದಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.
ಶಿಕಾರಿಪುರದ ಬೀರಪ್ಪ ಮೃತಪಟ್ಟವರು. ಇವರು, ತಮ್ಮ ಜಮೀನಿನಲ್ಲಿರುವ ಹುಣಸೆ ಮರದಲ್ಲಿ ಹುಣಸೆ ಹಣ್ಣನ್ನು ಕೊಯ್ಯಲು ಹೋಗಿದ್ದರು. ಈ ಸಂದರ್ಭದಲ್ಲಿ ಮರದ ಕೊಂಬೆ ಮುರಿದು ಕೆಳಗಡೆ ಬಿದ್ದು ಗಾಯವಾಗಿದ್ದು, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಗೆ ನಗರದ ಮೆಗ್ಗಾನ್ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ದೊಡ್ಡಪೇಟೆ ಠಾಣೆಯಲ್ಲಿ ದಾಖಲಾಗಿದೆ.
ಬ್ಯಾಗ್ ಕಳ್ಳನ ಬಂಧನ
ಶಿವಮೊಗ್ಗ: ಆಸ್ಪತ್ರೆ ಮುಂದೆ ನಿಂತಿದ್ದ ಕಾರೊಂದರ ಗಾಜು ಒಡೆದು, ಅದರಲ್ಲಿದ್ದ ವ್ಯಾನಿಟಿ ಬ್ಯಾಗ್ ಅಪಹರಿಸಿ ಪರಾರಿಯಾಗುತ್ತಿದ್ದ ಕಳ್ಳನನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ ಪ್ರಸಂಗ ಪಾರ್ಕ್ ಬಡಾವಣೆ ಮುಖ್ಯ ರಸ್ತೆಯಲ್ಲಿ ನಡೆಯಿತು. ನಗರದ ಮಾರ್ನಮಿ ಬೈಲ್ ಬಡಾವಣೆ ವಾಸಿ ಜಬೀವುಲ್ಲಾ (22) ಬಂಧಿತ ಆರೋಪಿ. ಸಾರ್ವಜನಿಕರು ನೀಡಿದ ಏಟಿನಿಂದ ಗಾಯಗೊಂಡಿರುವ ಆತನನ್ನು ಪೊಲೀಸರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ನಿವಾಸಿಯಾದ ತಾರೇಶ್ ಅವರು ನಗರದ ವಾತ್ಸಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿಯೊಬ್ಬರ ಆರೋಗ್ಯ ವಿಚಾರಿಸಲು ತಮ್ಮ ಕುಟುಂಬ ಸದಸ್ಯರೊಂದಿಗೆ ಇಂಡಿಕಾ ಕಾರಿನಲ್ಲಿ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದರು.
ಮಧ್ಯಾಹ್ನ ಕಾರನ್ನು ಆಸ್ಪತ್ರೆಯ ಸಮೀಪ ನಿಲ್ಲಿಸಿ ಸಂಬಂಧಿಯನ್ನು ಮಾತನಾಡಿಸಲು ಆಸ್ಪತ್ರೆಯ ಒಳಗೆ ತೆರಳಿದ್ದರು. ಈ ವೇಳೆ ಜವೀವುಲ್ಲಾ ಕಬ್ಬಿಣದ ರಾಡ್ ಮೂಲಕ ಕಾರಿನ ಗಾಜು ಒಡೆದು ಕಾರಿನೊಳಗಿದ್ದ ವ್ಯಾನಿಟಿ ಬ್ಯಾಗ್ ಅಪಹರಿಸಿಕೊಂಡು ಓಡಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ಜಬೀವುಲ್ಲಾನನ್ನು ಬೆನ್ನಟ್ಟಿ ಹಿಡಿದು, ಹಿಗ್ಗಾಮುಗ್ಗಾ ಥಳಿಸಿದರು. ನಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಿ, ಬ್ಯಾಗನ್ನು ತಾರೇಶ್‌ಗೆ ನೀಡಿದರು. ಜಯನಗರ ಠಾಣೆ ಸಬ್‌ಇನ್ಸ್‌ಪೆಕ್ಟರ್ ಡಿ.ಆರ್. ಭರತ್ ಕುಮಾರ್ ಮತ್ತವರ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಮಹಿಳೆ ಕಾಣೆ
ಭದ್ರಾವತಿ: ಪಟ್ಟಣದ ಕೂಲಿಬ್ಲಾಕ್ 3ನೇ ಕ್ರಾಸ್ ವಾಸಿ ಎ. ರೀಟಾ (42) ಜ.19ರಿಂದ ಕಾಣೆಯಾಗಿದ್ದಾರೆಂದು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರೀಟಾ ಅವರು 5 ಅಡಿ 6 ಅಂಗುಲ ಎತ್ತರವಿರುದ ಸಾಧಾರಣ ಮೈಕಟ್ಟನ್ನು ಹೊಂದಿರುತ್ತಾರೆ. ಎಣ್ಣೆಗೆಂಪು ಮೈಬಣ್ಣ ಹೊಂದಿರುವ ಈಕೆ ಕೆಂಪು ಬಣ್ಣದ ಸೀರೆ ಮತ್ತು ಕಪ್ಪು ಬ್ಲೌಸ್ ಧರಿಸಿದ್ದಾರೆ.
ಬಲಗೈ ಮೇಲೆ ಗಾಯದ ಗುರುತು ಇದ್ದು ಕನ್ನಡ, ಹಿಂದಿ ಮತ್ತು ತಮಿಳು ಭಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ನ್ಯೂಟೌನ್ ಠಾಣೆ (ದೂರವಾಣಿ-08282274313), ನಗರ ವೃತ್ತ ನಿರೀಕ್ಷಕರ ಕಚೇರಿ (08282266549) ಅಥವಾ ಡಿವೈಎಸ್ಪಿ (08282266252) ಅವರ ಕಚೇರಿಗೆ ತಿಳಿಸಬೇಕೆಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪುರುಷ ಕಾಣೆ
ಭದ್ರಾವತಿ: ಪಟ್ಟಣದ ಐಟಿಐ ಬಳಿ ಇರುವ ಹೆಬ್ಬಂಡಿ ರಸ್ತೆಯ ವಾಸಿ ರೇಣುಕಪ್ಪ (45) ಜ.13ರಿಂದ ಕಾಣೆಯಾಗಿದ್ದಾರೆಂದು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇವರು 5 ಅಡಿ 2 ಅಂಗುಲ ಎತ್ತರವಿದ್ದು ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಗೋಧಿ ಮೈಬಣ್ಣ ಹೊಂದಿರುವ ಇವರು ಕೆಂಪು ಬಣ್ಣದ ಶರ್ಟ್ ಮತ್ತು ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಎಡಕೆನ್ನೆಯ ಮೇಲೆ ಗಾಯದ ಗುರುತು ಇರುವ ಇವರು ಕನ್ನಡ ಭಾಷೆ ಮಾತನಾಡಬಲ್ಲರು. ಈ ಬಗ್ಗೆ ಮಾಹಿತಿ ದೊರೆತಲ್ಲಿ ನ್ಯೂಟೌನ್ ಠಾಣೆ (ದೂರವಾಣಿ-08282274313), ನಗರ ವೃತ್ತ ನಿರೀಕ್ಷಕರ ಕಚೇರಿ (08282266549) ಅಥವಾ ಡಿವೈಎಸ್ಪಿ (08282266252) ಅವರ ಕಚೇರಿಗೆ ತಿಳಿಸಲು ಕೋರಲಾಗಿದೆ.
ಯುವತಿ ನಾಪತ್ತೆ
ಭದ್ರಾವತಿ: ಉಜ್ಜಿನೀಪುರದ ಯುವರಾಜ್ ಎಂಬುವರ ಪುತ್ರಿ ನಂದಿನಿ ಜ.23ರಂದು ಬೆಳಗ್ಗೆ 10.30ಕ್ಕೆ ಶಿವಮೊಗ್ಗದಲ್ಲಿರುವ ಐಟಿಐಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಮನೆಗೆ ವಾಪಸಾಗಿರುವುದಿಲ್ಲವೆಂದು ಯುವರಾಜ್ ಕಾಗದನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈಕೆಗೆ ಐಟಿಐನಲ್ಲಿ ಓದುತ್ತಿದ್ದ ಕೃಷ್ಣ ಎಂಬ ಹುಡುಗನ ಪರಿಚಯವಿದ್ದು, ಆತನ ಜೊತೆ ಹೋಗಿರಬಹುದೆಂದು ಆಕೆಯ ಪೋಷಕರು ಶಂಕಿಸಿ ಆಕೆಯನ್ನು ಪತ್ತೆಮಾಡಿಕೊಡಬೇಕೆಂದು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.