ಬಾಬು ರಾಜಾರಾಮ್ ಅವರಿಗೆ ರಾಷ್ಟ್ರಪತಿ ಪದಕ
ಸಾಗರ: ಸಾಗರ ಮೂಲದ ಏರ್ಮಾರ್ಷಲ್ ಹೆರಿಕುದ್ರು ಬಾಬು ರಾಜಾರಾಮ್ ಅವರಿಗೆ 64ನೆಯ ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿಗಳ ಅತಿವಿಶಿಷ್ಟ ಸೇವಾ ಪದಕ ಲಭಿಸಿದೆ.
ಸಾಗರದಲ್ಲಿ ಎಚ್.ಬಿ. ಟೈಲರ್ ಎಂದು ಹೆಸರು ಮಾಡಿದ ಸಮಾಜವಾದಿ ಎಚ್. ಬಾಬು ಮತ್ತು ಬಿ. ಕಮಲಮ್ಮ ಅವರ ಹಿರಿಯ ಪುತ್ರರಾದ ಇವರಿಗೆ 2011ರಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಕೂಡ ಲಭಿಸಿತ್ತು.
ಹೆರಿಕುದ್ರು ಬಾಬು ರಾಜಾರಾಮ್ ಅವರು 10 ಜೂನ್ 1977ರಲ್ಲಿ ಆಡಳಿತ ಏರ್ ಟ್ರಾಫಿಕ್ ನಿಯಂತ್ರಕ ಹುದ್ದೆಯನ್ನು ವಹಿಸಿಕೊಳ್ಳುವುದರ ಮೂಲಕ ಭಾರತೀಯ ವಾಯುದಳದಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಆರಂಭಿಸಿ, ನಂತರ ಪೈಲಟ್ ಆಫೀಸರ್, ಫ್ಲೈಯಿಂಗ್ ಆಫೀಸರ್, ಫ್ಲೈಟ್ ಲೆಫ್ಟಿನಂಟ್, ಸ್ಕ್ವಾಡ್ರನ್ ಲೀಡರ್, ವಿಂಗ್ ಕಮಾಂಡರ್, ಗ್ರೂಪ್ ಕ್ಯಾಪ್ಟನ್, ಏರ್ ಕಮಾಂಡರ್, ಏರ್ ವೇಸ್ ಮಾರ್ಷಲ್ ಹೀಗೆ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪ್ರಸ್ತುತ ಏರ್ ಮಾರ್ಷಲ್ ಆಗಿ ದೆಹಲಿಯ ಕೇಂದ್ರ ಕಚೇರಿಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ರಾಷ್ಟ್ರಪತಿಗಳ ಅತಿವಿಶಿಷ್ಟ ಸೇವಾ ಪದಕದಂತಹ ಅತ್ಯುನ್ನತ ಗೌರವ ದೊರಕಿರುವುದು ಸಾಗಕ್ಕೊಂದು ಹೆಮ್ಮೆ.