ಭಾಷಣ ಸ್ಪರ್ಧೆ ವಿಜೇತರ ವಿವರ (ಸುದ್ದಿ ಸಂಕ್ಷೇಪ)
ಶಿವಮೊಗ್ಗ: ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಕುಷ್ಟರೋಗ ನಿವಾರಣಾ ಪಕ್ಷಾಚರಣೆಯ ಅಂಗವಾಗಿ ನಗರದ ದುರ್ಗಿಗುಡಿಯಲ್ಲಿರುವ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕುಷ್ಟರೋಗ ನಿವಾರಣೆ ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಶೃತಿ ಎಂ. ಪ್ರಥಮ, ಶಕೀಲ್ ಅಹ್ಮದ್ ದ್ದ್ವಿತೀಯ ಹಾಗೂ ಶೀಲಾ. ಇ ತೃತೀಯ ಸ್ಥಾನ ಗಳಿಸಿದ್ದಾರೆ ಎಂದು ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿಗಳು ತಿಳಿಸಿದ್ದಾರೆ.
ಸರ್ವೋತ್ತಮ ಪ್ರಶಸ್ತಿ
ಶಿವಮೊಗ್ಗ: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಶುಶ್ರೂಷಕಿ ಎಚ್.ಟಿ. ಅನ್ನಪೂರ್ಣ ಅವರು ಸಲ್ಲಿಸಿದ ಕರ್ನಾಟಕ ನಾಗರಿಕ ಸೇವೆಯನ್ನು ಪರಿಗಣಿಸಿ, ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸರ್ವೋತ್ತಮ ಪ್ರಶಸ್ತಿಗೆ ಭಾಜನರಾಗಿರುವ ಎಚ್.ಟಿ. ಅನ್ನಪೂರ್ಣರವರಿಗೆ ಸಂಸ್ಥೆಯ ನಿರ್ದೇಶಕರು, ಆಡಳಿತ ವೃಂದ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.
ಅರ್ಜಿ ಆಹ್ವಾನ
ಶಿವಮೊಗ್ಗ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಸಕ್ತ ಸಾಲಿನಲ್ಲಿ ಜೈನ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿ ಪೋಷಕರ ವಾರ್ಷಿಕ ವರಮಾನ 2 ಲಕ್ಷ ಮೀರಿರಬಾರದು. ಕಳೆದ ವರ್ಷ ವ್ಯಾಸಂಗ ಮಾಡಿದ ತರಗತಿಯಲ್ಲಿ ಶೇ.50 ಅಂಕ ಗಳಿಸಿರಬೇಕು ಹಾಗೂ ಸಂಬಂಧಿಸಿದ ತಹಸೀಲ್ದಾರರಿಂದ ಜಾತಿ ಮತ್ತು ಆದಾಯ ಪ್ರಮಾಣಪತ್ರ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಅಂತರ್ಜಾಲ ತಾಣ ನಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಫೆ.23ರೊಳಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಲ್ಲಿಸಬಹುದಾಗಿದೆ.
ಸಂತಾಪ
ಶಿರಾಳಕೊಪ್ಪ: ನಿವೃತ್ತ ಶಿಕ್ಷಕ ಮಡಿವಾಳರ್ ಅವರ ನಿಧನಕ್ಕೆ ಸಂಸದ ಬಿ.ವೈ. ರಾಘವೇಂದ್ರ ಸಂತಾಪ ಸೂಚಿಸಿದ್ದಾರೆ. ಮಡಿವಾಳರ್ ಅವರು ಶಿಕ್ಷಕ ವೃತ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ಶಿಕ್ಷಕರ ಕ್ಷೇತ್ರದ ಸಂಘಟನೆಗೆ ಶ್ರಮಿಸಿ, ಸಾಹಿತ್ಯ ಲೋಕ ಮತ್ತು ಶಿವ-ಶರಣರ ವಚನವನ್ನು ಚೆನ್ನಾಗಿ ಬಲ್ಲವರಾಗಿದ್ದ ವ್ಯಕ್ತಿಯನ್ನು ಕಳೆದು ಕೊಂಡು ಸಾಹಿತ್ಯಲೋಕ ಮತ್ತು ಶಿಕಾರಿಪುರ ತಾಲೂಕು ಬಡವಾಗಿದೆ ಎಂದಿದ್ದಾರೆ.