ಸೈಡ್ಗೆ ಸರಿದ ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ
ಶಿವಮೊಗ್ಗ: ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಓಲೈಸಲೆಂದು ಉದ್ದೇಶಿತ ಪ್ರಾಧಿಕಾರಕ್ಕೆ ಮುಖ್ಯಮಂತ್ರಿಯವರೇ ಅಧ್ಯಕ್ಷರೆಂದು ಮಾಡಿದ್ದೇ ತಪ್ಪಾಯಿತೇನೋ, ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲೇ ಇಲ್ಲ.
2010ರ ಮಾರ್ಚ್ 5ರಂದು ಯಡಿಯೂರಪ್ಪ ಅವರು ಬಜೆಟ್ನಲ್ಲಿ ಪ್ರವಾಸೋದ್ಯಮ- ಪಾರಂಪರಿಕ ಸ್ಥಳಗಳ ರಕ್ಷಣೆಗಾಗಿ ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ ರಚಿಸುವುದಾಗಿ ಘೋಷಿಸಿದ್ದರು. 20 ಕೋಟಿ ರು. ಅನುದಾನವನ್ನೂ ಮೀಸಲಿಟ್ಟಿದ್ದರು. ಇದಾಗಿ 3 ವರ್ಷವಾಗುತ್ತಾ ಬಂದರೂ ರಚನೆಯಾಗಿಲ್ಲ.
ಬಜೆಟ್ನಲ್ಲಿ ಘೋಷಣೆಯಾದ ನಂತರ ಪ್ರಾಧಿಕಾರದ ರೂಪುರೇಷೆಯ ನಿಯಮ ರೂಪಿಸಲು ಅಧಿಕಾರಿಗಳು ಸುಮಾರು ಎರಡು ವರ್ಷ ಸಮಯ ತೆಗೆದುಕೊಂಡರು. ಅಷ್ಟರಲ್ಲಾಗಲೇ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ಅಂತಇಂತೂ 2011ರ ಡಿಸೆಂಬರ್ ತಿಂಗಳಲ್ಲಿ ಕರಡು ಸಿದ್ಧಪಡಿಸಲಾಯಿತು. ಆಗ ಮುಖ್ಯಮಂತ್ರಿಯಾಗಿದ್ದು ಡಿ.ವಿ. ಸದಾನಂದಗೌಡ. 2012ರ ವರ್ಷಾರಂಭದಲ್ಲಿ ನಡೆದ 11ನೇ ವಿಧಾನಸಭೆ ಅಧಿವೇಶನದಲ್ಲಿ ಈ ಕರಡು ಮಸೂದೆಯನ್ನು ಮಂಡಿಸಿ ಒಪ್ಪಿಗೆಯನ್ನೂ ಪಡೆಯಲಾಯಿತು. ಇದೇ ವರ್ಷ ಏಪ್ರಿಲ್ 26ರಂದು ರಾಜ್ಯಪಾಲ ಅಂಕಿತವೂ ದೊರೆತು ಅಧಿಸೂಚನೆ ಹೊರಡಿಸಲಾಯಿತು. (2012ರ ಕರ್ನಾಟಕ ಅಧಿನಿಯಮ ಸಂಖ್ಯೆ 21) ಇದಾದ ಸ್ವಲ್ಪ ದಿನಗಳಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದರು. ಜಿಲ್ಲೆಯವರೇ ಆದ ಕೆ.ಎಸ್. ಈಶ್ವರಪ್ಪ ಉಪಮುಖ್ಯಮಂತ್ರಿಯಾದರು. ಆದರೆ ಇವರ್ಯಾರೂ ಈ ಪ್ರಾಧಿಕಾರದ ಅನುಷ್ಠಾನಕ್ಕೆ ಮನಸ್ಸು ಮಾಡಲೇ ಇಲ್ಲ.
ಅಡ್ಡಿಯಾಗಿದ್ದು: ಈ ಪ್ರಾಧಿಕಾರ ಬಿ.ಎಸ್. ಯಡಿಯೂರಪ್ಪ ಅವರ ಕನಸಿನ ಕೂಸು. ಪ್ರಾಧಿಕಾರ ರಚನೆಗೆ ಮುನ್ನ ಹಲವು ಸುತ್ತಿನ ಸಭೆಗಳನ್ನು ಅವರು ನಡೆಸಿದ್ದರು. ಹಿರಿಯ ಐಎಎಸ್ ಅಧಿಕಾರಿ ಜಾಮದಾರ್ ಅವರನ್ನು ಈ ಮೂರು ಜಿಲ್ಲೆಗೆ ಸಮೀಕ್ಷೆಗೆಂದು ಕಳುಹಿಸಿಕೊಟ್ಟಿದ್ದರು. ಅವರೇ ಮುಖ್ಯಮಂತ್ರಿಯಾಗಿದ್ದರಿಂದ ಅಧಿಕಾರಿಗಳು ಮುಖ್ಯಮಂತ್ರಿಯವರೇ ಈ ಪ್ರಾಧಿಕಾರದ ಅಧ್ಯಕ್ಷರೆಂದು ಮಸೂದೆಯಲ್ಲಿ ಬರೆದರು. ಅದರಂತೆ ಅಂಗೀಕಾರವೂ ಆಯಿತು.
ಮಸೂದೆ ಅಂಗೀಕಾರವಾಗುವ ಸಂದರ್ಭದಲ್ಲಿ ಯಡಿಯೂರಪ್ಪ ಅವರೊಂದಿಗೆ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡ ಸಂಬಂಧ ಹಳಸಿತ್ತು. ಡಿವಿಎಸ್ ಕಾಲದಲ್ಲೇ ಅಂಗೀಕಾರವಾದರೂ ಅವರು ಆಸಕ್ತಿ ವಹಿಸಲಿಲ್ಲ. ನಂತರ ಜಗದೀಶ್ ಶೆಟ್ಟರ್ ಅವರು ಆಸಕ್ತಿ ತೋರಲಿಲ್ಲ. ಎಲ್ಲವನ್ನೂ ಶಿವಮೊಗ್ಗಕ್ಕೇ ಕೊಡಲಾಗಿದೆ ಎಂಬ ಭಾವನೆ ಇವರದ್ದಾಗಿತ್ತು. ಹಾಗಾಗಿ ಈ ಪ್ರಾಧಿಕಾರ ಟೇಕ್ ಆಫ್ ಆಗಲೇ ಇಲ್ಲ.
ಪ್ರಯತ್ನಗಳು: ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತರುವ ಹಲವು ಬಿಡಿ ಪ್ರಯತ್ನಗಳು ನಡೆದವು. ಜಾಮದಾರ್ ಅವರು ಮೂರು ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾಗ ಅವರ ಜತೆ ಕೈ ಜೋಡಿಸಿದ್ದ ಇತಿಹಾಸ ತಜ್ಞ ಜಯದೇವಪ್ಪ ಜೈನಕೇರಿ ಅವರು ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರು. ಶಿವಮೊಗ್ಗವನ್ನು ಕೇಂದ್ರವಾಗಿ ಹೊಂದಿರುವ ಈ ಪ್ರಾಧಿಕಾರದ ಕಚೇರಿಯನ್ನು ನಾಟ್ಯರಾಣಿ ಶಾಂತಲೆಯ ಜನ್ಮಸ್ಥಳ ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯಲ್ಲಿ ಆರಂಭಿಸುವಂತೆ ಕೋರಿದ ಪ್ರಸ್ತಾವನೆಯೂ ಸರ್ಕಾರದ ಮುಂದೆ ಇದೆ.
ಈ ನಡುವೆ ಯಡಿಯೂರಪ್ಪ ಅವರು ಪ್ರಾಧಿಕಾರ ರಚನೆಗೆಂದು ಬಿಡುಗಡೆ ಮಾಡಿದ್ದ 20 ಕೋಟಿ ರು. ಎಲ್ಲಿದೆ ಎಂದು ಯಾರಿಗೂ ಗೊತ್ತಿಲ್ಲ. ಜಿಲ್ಲೆಗಂತೂ ಆ ಹಣ ಬಂದಿಲ್ಲ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ. ಮೂಲಗಳ ಪ್ರಕಾರ ಈ ಹಣ ಪರಂಪರೆ ಇಲಾಖೆಗೆ ಹೋಗಿದೆ.
ಏನೇ ಆದರೂ ಮಹತ್ವದ ಯೋಜನೆಯೊಂದು ದೂರದೃಷ್ಟಿ ಸಮಸ್ಯೆಯಿಂದ, ಇಚ್ಚಾಶಕ್ತಿಯ ಕೊರತೆಯಿಂದ, ಪೂರ್ವಗ್ರಹದಿಂದ ನೆನೆಗುದಿಗೆ ಬಿದ್ದಿದೆ.
ಪ್ರಾಧಿಕಾರದ್ದು ವಿಶಾಲ ವ್ಯಾಪ್ತಿ
ಅಧಿಸೂಚನೆಯಂತೆ ಇದು ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯನ್ನು ಹೊಂದಿದ ಪ್ರಾಧಿಕಾರ. ಈ ಪ್ರಾಧಿಕಾರ ರಚನೆಯ ಮುಖ್ಯ ಉದ್ದೇಶಗಳು ಇಂತಿವೆ.
- ಸಹ್ಯಾದ್ರಿ ಪರಂಪರೆ ಪ್ರದೇಶದಲ್ಲಿರುವ ಐತಿಹಾಸಿಕ, ಪಾರಂಪರಿಕ ಮತ್ತು ಜಾನಪದೀಯ ಪರಂಪರೆ, ಮೌಲ್ಯಗಳನ್ನು ಉಳಿಸಿ, ಬೆಳೆಸುವುದು.
- ಸಾಂಸ್ಕೃತಿಕ ಚಟುವಟಿಕೆಗಳನ್ನು ಸಹ್ಯಾದ್ರಿ ಪರಂಪರೆ ಪ್ರದೇಶದಲ್ಲಿ ಹಮ್ಮಿಕೊಂಡು, ಸಾಂಸ್ಕೃತಿಕ ಅವಶ್ಯಕತೆಗಳನ್ನು ಪೂರೈಸುವುದು.
- ಸಹ್ಯಾದ್ರಿ ಪರಂಪರೆ ಪ್ರದೇಶದಲ್ಲಿ ಉತ್ಸವಗಳನ್ನು ಹಮ್ಮಿಕೊಳ್ಳುವುದು, ಪರಂಪರೆಯನ್ನು ಬಿಂಬಿಸುವ ವಸ್ತು ಸಂಗ್ರಹಾಲಯಗಳನ್ನು ಕಟ್ಟುವ, ಸಹ್ಯಾದ್ರಿ ಪರಂಪರೆ ಬಗ್ಗೆ ಸಂಪೂರ್ಣ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಇತ್ಯಾದಿ...
- ಹೊನ್ನಾಳಿ ಚಂದ್ರಶೇಖರ್