ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕುಡಿವ ನೀರು ಪೂರೈಕೆಗೆ ಆದ್ಯತೆ: ಜಿಪಂ ಸಿಇಒ

Lingaraj Badiger
Updated On : 6 Feb 2013, 10:35 am

ಶಿವಮೊಗ್ಗ: ಜಿಲ್ಲೆಯಲ್ಲಿ ಬಿಗಡಾಯಿಸುತ್ತಿರುವ ಕುಡಿವ ನೀರಿನ ಸಮಸ್ಯೆಯನ್ನು ಎದುರಿಸಲು ಆದ್ಯತೆ ಮೇಲೆ ಅಗತ್ಯ  ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕುಮಾರ್ ಸೆಂಥಿಲ್ ಹೇಳಿದ್ದಾರೆ.
ಮಂಗಳವಾರ ಜಿಪಂ ಕಚೇರಿಯಲ್ಲಿ ನಿರ್ಗಮಿತ ಸಿಇಓ ಸಂಜಯ ಬಿಜ್ಜೂರ್ ಅವರಿಂದ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ತಲೆದೋರಿರುವ ಕುಡಿಯುವ ನೀರು ಸಮಸ್ಯೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆಯುತ್ತೇನೆ. ಅಗತ್ಯ ಬಿದ್ದರೆ ಸಮಸ್ಯೆಯಿರುವ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದ ಅವರು, ಟ್ಯಾಂಕರ್ ಮೂಲಕ ನೀರು ಪೂರೈಕೆ ಸೇರಿದಂತೆ ಅಗತ್ಯವಿರುವ ಎಲ್ಲ ರೀತಿಯ ಪರ್ಯಾಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಸಮರ್ಪಕ ಅನುಷ್ಠಾನ: ಕೇಂದ್ರ- ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ಹಲವು ಯೋಜನೆ ಜಾರಿಗೆ ತಂದಿವೆ, ಈ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ತಮ್ಮ ವ್ಯಾಪ್ತಿಯಲ್ಲಿ ಸೂಕ್ತ ಕ್ರಮಕೈಗೊಳ್ಳುತ್ತೇನೆ, ಗ್ರಾಮೀಣ ಪ್ರದೇಶಗಳ  ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸ್ಥಳೀಯ ಸಮಸ್ಯೆಗಳ ಅಧ್ಯಯನ ನಡೆಸಿ ಪರಿಹಾರೋಪಾಯಗಳನ್ನು ಕೈಗೊಳ್ಳುತ್ತೇನೆ ಎಂದರು.
ಸದ್ಬಳಕೆ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಸಹಕಾರ, ಸಮನ್ವಯತೆಯಿರಬೇಕು. ಇದು ತಮ್ಮ ಗುರುತರ ಜವಾಬ್ದಾರಿ ಎಂಬುವುದನ್ನು ಅರಿತುಕೊಂಡು ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಯೋಜನೆಗಳ ಸದ್ಬಳಕೆ ಸಾಧ್ಯ ಎಂಬುವುದು ತಮ್ಮ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿದ ಅವರು, ಈ ನಿಟ್ಟಿನಲ್ಲಿ ಸೂಕ್ತ ಹೆಜ್ಜೆ ಇಡುವುದಾಗಿ ಹೇಳಿದರು.
ಅಧ್ಯಯನ: ಗ್ರಾಮೀಣ ಕ್ಷೇತ್ರ ತಮ್ಮ ನೆಚ್ಚಿನ ಆಯ್ಕೆಯಾಗಿದ್ದು ಮೊದಲಿನಿಂದಲೂ ಈ ಕುರಿತಂತೆ ತಮಗೆ ಅತೀವ ಆಸಕ್ತಿಯಿದೆ. ಐಎಎಸ್‌ಗೆ ಆಯ್ಕೆಯಾಗುವ ಮುನ್ನ ತಮಿಳುನಾಡಿನಲ್ಲಿ ಎರಡು ವರ್ಷ ಸ್ವಯಂ ಸೇವಾ ಸಂಸ್ಥೆಯೊಂದರ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಿ ಅಧ್ಯಯನ ನಡೆಸಿದ್ದೇನೆ ಎಂದರು.
ಈ ಮೊದಲು ತಾವು ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಗ್ರಾಮೀಣ ಪ್ರದೇಶಗಳ ಜನಜೀವನದ ಬಗ್ಗೆ ಅರಿವಿದೆ ಎಂದ ಅವರು, ಅಧಿಕಾರಿಗಳು, ಜನಪ್ರತಿನಿಧಿಗಳ ನೆರವಿನೊಂದಿಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತೇನೆ. ಯಾವುದೇ ಒತ್ತಡಕ್ಕೂ ತಾವು ತಲೆಬಾಗುವುದಿಲ್ಲ. ಸರ್ಕಾರದ ನೀತಿ-ನಿಯಮಗಳಂತೆ ಕಾರ್ಯನಿರ್ವಹಿಸುವುದಾಗಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಶಶಿಕಾಂತ್ ಸೆಂಥಿಲ್ ಮೂಲತಃ ಚೆನ್ನೈ ನಗರದವರು. ಬಿ.ಇ. ಪದವೀಧರರಾಗಿದ್ದು, 2009ರಲ್ಲಿ ಐಎಎಸ್‌ಗೆ ಆಯ್ಕೆಯಾದರು. ಮಂಡ್ಯದಲ್ಲಿ ಪ್ರೊಬೆಷನರಿ, ಬಳ್ಳಾರಿಯಲ್ಲಿ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಪ್ರಥಮ ಬಾರಿಗೆ ಜಿಪಂ ಸಿಇಓ ಆಗಿ ಕಾರ್ಯನಿರ್ವಹಣೆ ಅವಕಾಶ ಪಡೆದುಕೊಂಡಿದ್ದಾರೆ.
ಜಿಪಂ ಉಪಾಧ್ಯಕ್ಷೆ ಹೇಮಾ ಪಾವನಿ, ಶಿಕ್ಷಣ-ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯಿತ್ರಿ ಷಣ್ಮುಖಪ್ಪ, ಸದಸ್ಯರಾದ ಕಲಗೋಡು ರತ್ನಾಕರ್, ಈಸೂರು ಬಸವರಾಜ್ ಮೊದಲಾದವರು ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಶುಭ ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement