ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ
ಶಿವಮೊಗ್ಗ: ಆಸ್ತಿ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿದ್ದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸತ್ರ ಹಾಗೂ 1ನೇ ಶೀಘ್ರ ವಿಲೇವಾರಿ ನ್ಯಾಯಾಲಯ ಒಬ್ಬನಿಗೆ ಜೀವಾವಧಿ ಶಿಕ್ಷೆ ಹಾಗೂ ನಾಲ್ವರಿಗೆ 5 ವರ್ಷ ಕಠಿಣ ಕಾರಾಗೃಹ ವಾಸ, 10 ಸಾವಿರ ರುಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಅವಿನಾಶ್ ಅಲಿಯಾಸ್ ಅಭಿ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಗೌರಮ್ಮ, ಉಪಾ, ತುಳಸಮ್ಮ ಹಾಗೂ ಕಿರಣ್ಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. 2011ರ ಜುಲೈ 28ರಂದು ನಗರದ ಸವಾರ್ಲೈನ್ ರಸ್ತೆಯಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಆರೋಪಿ ಅವಿನಾಶ್ ಹಾಗೂ ರವೀಶ್ ಎಂಬುವರ ನಡುವೆ ಗಲಾಟೆಯಾಗಿದ್ದು, ಈ ವೇಳೆ ಅವಿನಾಶ್, ರವೀಶನ ಮನೆಯ ಹತ್ತಿರ ಹೋಗಿ ರವೀಶನಿಗೆ ಮನೆಯ ಹೊರಗಡೆ ಕರೆದು ಬೆನ್ನಿಗೆ ಬಲವಾಗಿ ಚುಚ್ಚಿ ಕೊಲೆ ಮಾಡಿದ್ದರು. ಉಳಿದ ನಾಲ್ವರು ಕೊಲೆ ಮಾಡಲು ಪ್ರೇರಣೆ ನೀಡಿದ್ದರು. ಈ ಸಂಬಂಧ ಮೃತ ರವೀಶನ ಅಣ್ಣ ಮೋಹನ್ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ವೃತ್ತ ನಿರೀಕ್ಷಕ ವಿ.ಎಸ್. ಸಿದ್ದಲಿಂಗಪ್ಪ ತನಿಖೆ ಕೈಗೊಂಡು, ಆರೋಪಿಗಳನ್ನು ತನಿಖೆಗೆ ಒಳಪಡಿಸಿ, ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಮಧಸೂಧನ್ ವಾದ ಮಂಡಿಸಿದ್ದರು.