ಸಾಂಪ್ರದಾಯಿಕ ಚಿನ್ನ-ಬೆಳ್ಳಿ ಕೆಲಸಗಾರರಿಗೆ ಆಸರೆ
ಶಿವಮೊಗ್ಗ: ಬಹುರಾಷ್ಟ್ರೀಯ ಕಂಪನಿಗಳ ಹೊಡೆತಕ್ಕೆ ಸಿಕ್ಕಿ ಕೊಚ್ಚಿಹೋಗುತ್ತಿದ್ದ ಸ್ಥಳೀಯ ಚಿನ್ನಬೆಳ್ಳಿ ಕೆಲಸಗಾರರು ಹಾಗೂ ವ್ಯಾಪಾರಿಗಳಿಗೆ ಕೊನೆಗೂ ಒಂದು ಆಸರೆ ಸಿಕ್ಕಿದೆ.
ಕೇಂದ್ರ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆ ಮತ್ತು ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ತು ಆಶ್ರಯದಲ್ಲಿ ರಾಜ್ಯದ ಕೆಲವೆಡೆ ಜ್ಯುವೆಲರಿ ಕ್ಲಸ್ಟರ್ಗಳನ್ನು ಸ್ಥಾಪಿಸಲು ಮುಂದಾಗಿದೆ. ಇದರಿಂದ ಚಿನ್ನ, ಬೆಳ್ಳಿ ಕೆಲಸಗಾರಿಗೆ ಅನುಕೂಲವಾಗಲಿದ್ದು, ಕನಿಷ್ಠ ಪ್ರಮಾಣದಲ್ಲಿ ಹಣ ಉಳಿಸಲು ಸಹಾಯವಾಗಲಿದೆ.
ಪ್ರಮುಖ ನಗರಗಳಲ್ಲಿ ಕ್ಲಸ್ಟರ್: ಈ ಯೋಜನೆ ಸುಮಾರು 3-4 ವರ್ಷಗಳ ಹಿಂದೆಯೇ ದೇಶದ ವಿವಿಧ ಕಡೆ ಅನುಷ್ಠಾನಕ್ಕೆ ಬಂದಿದೆ. ಸದ್ಯ ಗುಜರಾತ್, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದೀಗ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸಿ ರಾಜ್ಯದ ಪ್ರಮುಖ ನಗರಗಳಲ್ಲಿ ಕ್ಲಸ್ಟರ್ ತೆರೆಯಲು ಅನುಮೋದನೆ ಸಿಕ್ಕಿದೆ. ಮೊದಲ ಹಂತದಲ್ಲಿ ಚಿನ್ನಬೆಳ್ಳಿ ಸಾಂಪ್ರದಾಯಿಕ ಕೆಲಸಗಾರರು ಹೆಚ್ಚಿರುವ ಮಲೆನಾಡು ವ್ಯಾಪ್ತಿಗೆ ಕೇಂದ್ರೀಕರಿಸಿ ಶಿವಮೊಗ್ಗದಲ್ಲಿ ಮತ್ತು ಕರಾವಳಿ ವ್ಯಾಪ್ತಿಯನ್ನೊಳಗೊಂಡಂತೆ ಮಂಗಳೂರಿನಲ್ಲಿ ಕ್ಲಸ್ಟರ್ ವ್ಯವಸ್ಥೆ ಜಾರಿಗೆ ತರಲು ತಯಾರಿ ನಡೆದಿದೆ.
ಏನಿದು ಜ್ಯೂವೆಲರಿ ಕ್ಲಸ್ಟರ್: 2ರಿಂದ 20 ಜನ ಚಿನ್ನ, ಬೆಳ್ಳಿ ವ್ಯಾಪಾರಿಗಳು, ಕೆಲಸಗಾರರು ಸೇರಿ ಒಂದು ಯೂನಿಟಟ್ರಚನೆಯಾಗುತ್ತದೆ. ಈ ರೀತಿಯ 20-50 ಯೂನಿಟ್ಗಳು ಸೇರಿ ಒಂದು ಕ್ಲಸ್ಟರ್ ಆಗುತ್ತದೆ. ಈ ಕ್ಲಸ್ಟರ್ಗೆ ಕೇಂದ್ರ ಸರ್ಕಾರದಿಂದ ಶೇ.70ರಷ್ಟು ಹಾಗೂ ರಾಜ್ಯ ಸರ್ಕಾರ ಶೇ.10-15ರಷ್ಟು (ಸುಮಾರು ಕನಿಷ್ಠ 5-10ಕೋಟಿ ರುಪಾಯಿವರೆಗೆ) ಅನುದಾನ ನೀಡುತ್ತದೆ. ಉಳಿದ ಶೇ.10-15ರಷ್ಟು ಹಣವನ್ನು ಆಯಾಯ ಕ್ಲಸ್ಟರ್ನ ಅಷ್ಟು ಸದಸ್ಯರು ಹೂಡಬೇಕು.
ಕ್ಲಸ್ಟರ್ ಯೋಜನೆ: ಶಿವಮೊಗ್ಗದ ಯೂನಿಟ್ಗಳು ಡಿಐಸಿಯಲ್ಲಿ(ಜಿಲ್ಲಾ ಕೈಗಾರಿಕಾ ಕೇಂದ್ರ) ನೋಂದಾಯಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ನಂತರದ ಪ್ರಕ್ರಿಯೆಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪರಿಶೀಲನೆ ನಡೆಸಿ ಕ್ಲಸ್ಟರ್ ಸ್ಥಾಪನೆ ಮಾಡಲು ಅನುಮೋದನೆ ನೀಡಲಾಗುತ್ತದೆ.
ಕೇಂದ್ರದ ಎಂಎಸ್ಎಂಇ(ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆ)- ಸಿಡಿಪಿ ಯೋಜನೆಯಂತೆ ಕ್ಲಸ್ಟರ್ ಸ್ಥಾಪನೆಗೆ ಅಗತ್ಯವಿರುವ ಎಸ್ಪಿವಿ(ಸ್ಪೆಷಲ್ ಪರ್ಪ್ಸ್ ವೈಕಲ್ಬೈಲಾವನ್ನು ನೋಂದಣಿ ಮಾಡಿಸಬೇಕು.
ಪ್ರಯೋಜನ ಏನು: ಅತೀ ಸಣ್ಣ ಮತ್ತು ಸಣ್ಣ ವ್ಯಾಪಾರಸ್ಥರು ಚಿನ್ನಬೆಳ್ಳಿ ಕೆಲಸಕ್ಕೆಂದು ದೊಡ್ಡ ಯಂತ್ರಗಳನ್ನು ಖರೀದಿ ಮಾಡಲು ಸಾಧ್ಯವಿಲ್ಲ, ದೊಡ್ಡ ವ್ಯಾಪಾರಿಗಳೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧೆ ಮಾಡಲೂ ಸಾಧ್ಯವಿಲ್ಲ. ಅಲ್ಲದೇ, ಚಿನ್ನ, ಬೆಳ್ಳಿ ಕೆಲಸಗಾಗರಿಗೆ ಕೆಲವೊಂದು ವಿಭಿನ್ನ ರೀತಿಯ ಮಾಡೆಲ್ಗಳನ್ನು ಮಾಡಿಕೊಡಲು ದೂರದ ಜಿಲ್ಲೆ ಅಥವಾ ರಾಜ್ಯಗಳಿಗೆ ಹೋಗಬೇಕಾದ ಅನಿವಾರ್ಯತೆ ಇರುತ್ತದೆ. ಇದರಿಂದ ಹಣ ಮತ್ತು ಸಮಯ ಎರಡು ವ್ಯರ್ಥವಾಗುತ್ತದೆ. ಈ ಸಮಸ್ಯೆಯನ್ನು ಮನಗಂಡ ಸರ್ಕಾರಗಳು(ಕೇಂದ್ರ, ರಾಜ್ಯ) ಜ್ಯುವೆಲರಿ ಕ್ಲಸ್ಟರ್ಗಳನ್ನು ತೆರೆಯುತ್ತಿವೆ.
ರಬ್ಬರ್ ಕಾಸ್ಟಿಂಗ್, ಲೇಸರ್, ಟೆಸ್ಟಿಂಗ್, ಹಾಲ್ಮಾರ್ಕ್ ಸೆಂಟರ್, ಗೋಲ್ಡ್ಪ್ಯೂರಿಫಿಕೇಷನ್ ಯಂತ್ರಗಳು ಕ್ಲಸ್ಟರ್ನಲ್ಲಿ ಇರುತ್ತವೆ. ಕ್ಲಸ್ಟರ್ ಸದಸ್ಯರು ಇದರಲ್ಲಿ, ತಮಗೆ ಬೇಕಾದ ಆಕೃತಿಗಳನ್ನು ಮಾಡಿಕೊಳ್ಳಬಹುದು.
ಜಿಲ್ಲೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಚಿನ್ನ, ಬೆಳ್ಳಿ ವೃತ್ತಿಬಾಂಧವರು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಚಿನ್ನ ಮತ್ತು ಬೆಳ್ಳಿ ವ್ಯಾಪಾರಿಗಳ, ಕೆಲಸಗಾರು ಸಂಘದಿಂದ ಶಿವಮೊಗ್ಗ ಜ್ಯೂವೆಲರಿ ಕ್ಲಸ್ಟರ್ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿಕೊಂಡಿದೆ. ಸದ್ಯ ಚಿನ್ನ, ಬೆಳ್ಳಿ ವೃತ್ತಿಬಾಂಧವರು ತಮ್ಮ ಸದಸ್ಯತ್ವವನ್ನು ಮಾಡಿಕೊಳ್ಳಬಹುದು. ಇದರಿಂದ ಸಣ್ಣ ವ್ಯಾಪಾರಿಗಳಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ. ಆದ್ದರಿಂದ ವೃತ್ತಿ ಬಾಂಧವರು ಇದರ ಪ್ರಯೋಜನ ಪಡೆಯಬಹುದು ಎನ್ನುತ್ತಾರೆ ಜಿಲ್ಲಾ ಕ್ಲಸ್ಟರ್ ಪ್ರಾಜೆಕ್ಟ್ ಕೋ ಆರ್ಡಿನೇಟರ್ ಸೆಂತಿಲ್ ವೇಲನ್.
ಮಾಹಿತಿಗಾಗಿ ಜಿಲ್ಲಾ ಕ್ಲಸ್ಟರ್ ಪ್ರಾಜೆಕ್ಟ್ ಕೊ ಆರ್ಡಿನೇಟರ್ ಸೆಂತಿಲ್ ವೇಲನ್ ಮೊ-9844021221 ಸಂಪರ್ಕಿಸಿ.
-ಮೋಹನ್ ಕುಮಾರ್ ಎನ್.