ಮಧ್ಯಸ್ಥರ ನಿಧನಕ್ಕೆ ಕಸಾಪ ಸಂತಾಪ
ಸಾಗರ: ಹಿರಿಯ ಸಾಹಿತಿ, ನಾಟಕಕಾರ, ತಾಳಮದ್ದಲೆ ಅರ್ಥದಾರಿ ವಿದ್ವಾಂಸ ನೀ.ನಾ. ಮಧ್ಯಸ್ಥರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂತಾಪ ಸೂಚಿಸಿದೆ.
ಮಧ್ಯಸ್ಥರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡು ಅನೇಕ ಯುವ ಸಾಹಿತಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿದವರು. ಅಲ್ಲದೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ. ಇವರ ನಿಧನದಿಂದ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದು ಪರಿಷತ್ ಪ್ರಕಟಣೆಯಲ್ಲಿ ತಿಳಿಸಿದೆ.
ನೀ.ನಾ. ಮಧ್ಯಸ್ಥರ ನಿಧನಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಂಟಿ ಕಾರ್ಯದರ್ಶಿ ಅಬಸೆ ದಿನೇಶಕುಮಾರ್ ಎನ್. ಜೋಷಿ, ಸಂಘಟನಾ ಕಾರ್ಯದರ್ಶಿ ಮ.ಸ. ನಂಜುಂಡಸ್ವಾಮಿ, ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷೆ ಶರಾವತಿ ಸಿ.ರಾವ್, ವಿನೋಬಾ ಯುವಕ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ಕಾರ್ಯ ದರ್ಶಿ ವಿ. ಶಂಕರ್, ವನಶ್ರೀ ವಿದ್ಯಾಸಂಸ್ಥೆಯ ಎಚ್.ಪಿ. ಮಂಜಪ್ಪ, ಮೈಸೂರು ಗುಡಿಗಾರರ ಸಂಘದ ಅಧ್ಯಕ್ಷ ಲೋಕೇಶಕುಮಾರ್, ಸೇವಾಸಾಗರ ವಿದ್ಯಾಸಂಸ್ಥೆ ಇನ್ನಿತರ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿವೆ.
ಹಾಗೆಯೇ ಮಧ್ಯಸ್ಥರ ನಿಧನಕ್ಕೆ ಸಾಹಿತಿ ಟಿ. ಮಹಾಬಲೇಶ್ವರ ಭಟ್ಟರು ಸಂತಾಪ ವ್ಯಕ್ತಪಡಿಸಿದ್ದಾರೆ. ಮಧ್ಯಸ್ಥರು ಸಾಹಿತ್ಯದ ಅನೇಕ ಪ್ರಾಕಾರಗಳಲ್ಲಿ ಕೆಲಸ ಮಾಡಿರುವುದನ್ನು ನೆನಪಿಸಿಕೊಂಡಿರುವ ಭಟ್ಟರು ಮಧ್ಯಸ್ಥರು ಕನ್ನಡ ಮತ್ತು ಹಿಂದಿ ಪಂಡಿತರಾಗಿ, ಉತ್ತಮ ಸಾಹಿತಿಗಳಾಗಿ, ನಾಟಕಕಾರರಾಗಿ, ತಾಳಮದ್ದಲೆ ಅರ್ಥಧಾರಿಗಳಾಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದ್ದಾರೆ. ಮಧ್ಯಸ್ಥರ ನಿಧನ ಕಲಾಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.