ಕಣ್ಣೀರಿಟ್ಟ ಜಿಲ್ಲಾಧಿಕಾರಿ
ಶಿವಮೊಗ್ಗ: ಅಧಿಕಾರಿಗಳ ಮಟ್ಟದ ಸಭೆ, ಸುದ್ದಿಗೋಷ್ಠಿಗಳಲ್ಲಿ ವ್ಯಂಗ್ಯಭರಿತ ಮಾತುಗಳಿಂದಲೇ ನಗೆ ಅಲೆಯುಕ್ಕಿಸುವ ಜೊತೆಗೆ ಮಾರ್ಮಿಕವಾಗಿ ಚಾಟಿ ಬೀಸುತ್ತಿದ್ದ ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತ್ರ ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.
ಇಲ್ಲಿನ ಜನರ ಸ್ಪಂದನೆ, ಅಧಿಕಾರ ಸಹಕಾರ ಯಾವುದನ್ನೂ ಮರೆಯಲಾರೆ. ಹೇಗೆ ಅಭಿನಂದನೆ ಸಲ್ಲಿಸಬೇಕು ಗೊತ್ತಾಗುತ್ತಿಲ್ಲ, ಐ ಹ್ಯಾವ್ ನೋ ವರ್ಡ್ಸ್ ಎಂದು ಹೇಳುತ್ತಿದ್ದಂತೆ ಕಣ್ಣಿನಿಂದ ನೀರು ಚಿಮ್ಮಿಬಂತು. ಕೆಲ ನಿಮಿಷ ಸುದ್ದಿಗೋಷ್ಠಿ ನಡೆಯುತ್ತಿದ್ದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ನಿಶ್ಯಬ್ಧವಾಗಿಬಿಟ್ಟಿತು.
ಶಿವಮೊಗ್ಗ ಜಿಲ್ಲೆಯ ಜನತೆ ತಮಗೆ ನೀಡಿದ ಸಹಕಾರ ನೆನೆದು ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳುವ ವೇಳೆ ಭಾವುಕರಾದರು. ಒತ್ತರಿಸುತ್ತಿದ್ದ ಕಣ್ಣೀರನ್ನು ಅದುಮಿಡಲು ಅವರಿಂದ ಸಾಧ್ಯವಾಗಲೇ ಇಲ್ಲ. ಗದ್ಗದಿತರಾದರು, ತೊದಲುತ್ತಲೇ ಮಾತನಾಡಲು ಮುಂದಾದರಾದರೂ ಅದು ಸಾಧ್ಯವಾಗಲಿಲ್ಲ.
ಯಡಿಯೂರಪ್ಪ ಸಾಹೇಬ್ರು ಇದ್ದಿದ್ರೆ...: ನಿರ್ಗಮಿತ ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಪತ್ರಿಕಾಗೋಷ್ಠಿಯಲ್ಲಿನ ಉದ್ಘಾರವೊಂದು ಜಿಲ್ಲೆಯ ಅಭಿವೃದ್ಧಿ ದಾರಿಯ ಸ್ಪಷ್ಟ ಚಿತ್ರಣ ನೀಡಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬರುತ್ತಿತ್ತು. ಯಾವುದೇ ಕಾಮಗಾರಿಗಳಿಗೂ ಅಡ್ಡಿಯಾಗುತ್ತಿರಲಿಲ್ಲ. ಅನುದಾನದ ಕೊರತೆ ಉಂಟಾಗುತ್ತಿರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಪ್ರಸ್ತುತ ಆ ಸ್ಥಿತಿಯಿಲ್ಲ, ಬಿ.ಎಸ್. ಯಡಿಯೂರಪ್ಪ ಸಾಹೇಬ್ರು ಇದ್ದಿದ್ರೆ... ಎಂದು ಉದ್ಘಾರ ತೆಗೆದು ಮಾತು ನಿಲ್ಲಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.