ಡಿಸಿಎಂ ಜಿಲ್ಲೆಗೆ ಅರೆ ಕಾಸಿನ ಮಜ್ಜಿಗೆ
ಶಿವಮೊಗ್ಗ: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗಿದ್ದ ಸುವರ್ಣ ದಿನಗಳನ್ನು ಶೆಟ್ಟರ್ ಕಾಲದಲ್ಲಿ ಕಾಣಲು ಆಗದು ಎಂಬ ಅರಿವು ಜಿಲ್ಲೆಯ ಜನತೆಗಿತ್ತು. ಆದರೆ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಅಲ್ಪತೃಪ್ತರು ಎಂದು ಗೊತ್ತಿರಲಿಲ್ಲ.
ಅಡಕೆ ಬೆಳೆಗಾರರ ಸಂಕಷ್ಟಗಳು, ಹದಗೆಟ್ಟ ಸಾರಿಗೆ, ಕೈಗೂಡದ ನೀರಾವರಿ ಯೋಜನೆಗಳು, ಬಾರದ ಕೈಗಾರಿಕೆಗಳು, ಸಿಗದ ಪರಿಹಾರಗಳಿಂದ ಜನರು ಕೆಂಗೆಟ್ಟಿದ್ದರೆ ಅದಕ್ಕೆ ಹುಲ್ಲುಕಡ್ಡಿಯ ಆಸರೆಯೂ ಶೆಟ್ಟರಂಗಡಿಯ ಲೆಕ್ಕಾಚಾರದಲ್ಲಿ ಇರಲಿಲ್ಲ.
ಜಿಲ್ಲೆಗೆ ಸಿಕ್ಕಿದ್ದು: ಆಯವ್ಯಯದ ಮೊದಲ ಭಾಗದಲ್ಲಿ ಮಂಡಿಸಿದ ಕೃಷಿ ಬಜೆಟ್‌ನಲ್ಲಿ ಜಿಲ್ಲೆಗೆ ಏನೂ ಸಿಕ್ಕಿಲ್ಲ ಎನ್ನಬಹುದು. ರಾಜ್ಯದ 19 ಸ್ಥಳದಲ್ಲಿ ವೈಜ್ಞಾನಿಕ ಗೋದಾಮುಗಳನ್ನು ನಿರ್ಮಿಸುವುದಾಗಿ ಸರ್ಕಾರ ಘೋಷಿಸಿದ್ದು, ಅದರಲ್ಲಿ ಸೊರಬ ಹೆಸರೂ ಇದೆ. ಆಯವ್ಯಯದ ಎರಡನೇ ಭಾಗದಲ್ಲಿ ಜಿಲ್ಲೆಯ ಒಂದಿಷ್ಟು ಯೋಜನೆಗಳ ಪ್ರಸ್ತಾಪವಿದೆ.
ಶಿವಮೊಗ್ಗ, ಮಂಡ್ಯ, ಬೀದರ್, ರಾಯಚೂರು, ಹಾಸನ ಹಾಗೂ ಬೆಳಗಾವಿಯಲ್ಲಿರುವ ವೈದಕೀಯ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಒಟ್ಟು 407.63 ಕೋಟಿ ರು. ಒದಗಿಸಲಾಗಿದ್ದು, ಜಿಲ್ಲೆಗೆ ಪಾಲು ಸಿಗಲಿದೆ. ಜತೆಗೆ ಈ ಕಾಲೇಜುಗಳ ಪ್ರವೇಶಾವಕಾಶವನ್ನು 100ರಿಂದ 150ಕ್ಕೆ ಹೆಚ್ಚಿಸಲಾಗಿದೆ.
ಶಿವಮೊಗ್ಗ ತಾಲೂಕಿನ ಆಯನೂರಿನಲ್ಲಿ ಒಂದು ಬಸ್ಸು ನಿಲ್ದಾಣ ಹಾಗೂ ಸ್ಟೇಡಿಯಂ ನಿರ್ಮಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಶಿವಮೊಗ್ಗದ ಹೊಸ ಜೈಲು ಕಾಮಗಾರಿ ಇದೇ ವರ್ಷ 2013ರಲ್ಲಿ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಶೆಟ್ಟರ್ ಭರವಸೆ ನೀಡಿದ್ದಾರೆ. ಜತೆಗೆ ಶಿವಮೊಗ್ಗದಲ್ಲಿ ಕಳೆದೊಂದು ದಶಕದ ಬೇಡಿಕೆಯಾಗಿದ್ದ ಟ್ರಕ್ ಟರ್ಮಿನಲ್ ಚಿಂತನೆ ಇದ್ದು, ಸಾಧ್ಯತೆಯ ವರದಿ ಕೇಳಲಾಗಿದೆ. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ 152 ಕೋಟಿ ರು. ಅನುದಾನ ಸಿಗಲಿದೆ.
ತೀರ್ಥಹಳ್ಳಿಗೆ ಬಂಪರ್: ಆಗುಂಬೆ ಘಾಟಿ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರವು 41 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದು, ಶಂಕುಸ್ಥಾಪನೆಯಾಗಿ ವರ್ಷಗಳೇ ಉರುಳಿರುವ ಮಹಿಷಿ-ದಬ್ಬಣಗದ್ದೆ ಸೇತುವೆಗೆ 6 ಕೋಟಿ ರು. ನೆರವು ನೀಡಿದ್ದಾರೆ.
ಹೊಸನಗರ ಹಾಗೂ ತೀರ್ಥಹಳ್ಳಿಯ ರಸ್ತೆ ಹಾಗೂ ಸೇತುವೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ. ನಕ್ಸಲಲ್ಪೀಡಿತ ತಾಲೂಕುಗಳಿಗೆ ಘೋಷಿಸಿರುವ 5 ಕೋಟಿ ರು. ತೀರ್ಥಹಳ್ಳಿಗೆ ಸಿಗಲಿದೆ.
ಅಡಕೆ ಇಲ್ಲ ಮಾನ: ಅಡಕೆ ಬೆಳೆಗಾರರ ಸಂಕಷ್ಟಗಳ ನಿವಾರಣೆಗೆ ಯಾವ ಭರವಸೆಯೂ ಸಿಕ್ಕಿಲ್ಲ. ಅಡಕೆ ಸುಲಿಯುವ ಯಂತ್ರಕ್ಕೆ ವಿಧಿಸಿದ್ದ ತೆರಿಗೆಯನ್ನು ಶೇ.14.5ರಿಂದ ಶೇ.5.5ಕ್ಕೆ ಇಳಿಸಿರುವುದಷ್ಟೇ ಸಮಾಧಾನ. ಅಡಕೆ ಬೋರ್ಡ್ ಬಗ್ಗೆಯಾಗಲಿ, ಬೆಳೆಗಾರರ ಸಾಲದ ಬಗ್ಗೆಯಾಗಲಿ ಪ್ರಸ್ತಾಪವಿಲ್ಲ. ಗೋರಖ್ ಸಿಂಗ್ ವರದಿ ಬಗ್ಗೆಯಂತೂ ಮಾತೇ ಇಲ್ಲ. ಯಡಿಯೂರಪ್ಪ ಅವರ ನಂತರ ಮುಖ್ಯಮಂತ್ರಿಯಾದ ಡಿ.ವಿ. ಸದಾನಂದಗೌಡರಿಂದ ಜಗದೀಶ್ ಶೆಟ್ಟರ್ ಪರವಾಗಿಲ್ಲ. ಅವರು ಏನೂ ಕೊಟ್ಟಿರಲಿಲ್ಲ. ಇವರು ಸ್ವಲ್ಪವಾದರೂ ಕೊಟ್ಟಿದ್ದಾರೆ, ಅಷ್ಟೇ ವ್ಯತ್ಯಾಸ ಎಂಬ ಭಾವನೆ ಆರ್ಥಿಕ ತಜ್ಞರಿಂದ ವ್ಯಕ್ತವಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.