ಸುವರ್ಣ ಸಂಭ್ರಮದಲ್ಲಿ ಯಡೂರು ಪ್ರೌಢಶಾಲೆ
ಹೊಸನಗರ: ತಾಲೂಕಿನ ಗಡಿಭಾಗದಲ್ಲಿರುವ ಯಡೂರು ಮತ್ತು ಸುತ್ತಮುತ್ತಲಿನ ಗ್ರಾಮಗಳು ಸಮಸ್ಯೆಗಳಿಂದಾಗಿಯೇ ಗಮನ ಸೆಳೆದಿದ್ದು ಹೆಚ್ಚು. ಮುಳುಗಡೆ ಒಂದಡೆಯಾದರೆ, ಸೂಕ್ತ ಪರಿಹಾರ ಎಂಬುದು ಇಂದಿಗೂ ಮರೀಚಿಕೆಯಾಗಿದೆ. ಈ ನಡುವೆ ನಕ್ಸಲ್ ಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಕೂಡ ಇಡೀ ಗ್ರಾಮವನ್ನು ಹೈರಾಣಾಗುವಂತೆ ಮಾಡಿದೆ.
ಹಲವು ದಶಕಗಳ ಸಮಸ್ಯೆಗಳ ನಡುವೆ ಇಲ್ಲೊಂದು ಸರ್ಕಾರಿ ಪ್ರೌಢಶಾಲೆ 50 ವಸಂತಕ್ಕೆ ಕಾಲಿರಿಸಿದ್ದು, ಸುವರ್ಣ ಸಂಭ್ರಮದ ಸಡಗರ ಕಾಣುತ್ತಿದೆ. 3 ದಿನಗಳ ಕಾಲ ನಡೆಯುವ ವೈವಿಧ್ಯಮಯ ಕಾರ್ಯಕ್ರಮದಲ್ಲಿ ತನ್ನನ್ನು ಸಂಪೂರ್ಣವಾಗಿ ತೆರೆದುಕೊಳ್ಳುತ್ತಿದೆ.
ತನ್ನದೇ ಕೊಡುಗೆ: ಸುತ್ತಲೂ ಹಿನ್ನೀರು, ದಟ್ಟ ಕಾನನದ ನಡುವೆ ಮೈದಳೆದ ಈ ಪ್ರೌಢಶಾಲೆ ಸುಳುಗೋಡು, ಕೊಳವಾಡಿ, ಉಳ್ತಿಗಾ, ಮೇಲುಸುಂಕ, ಹಳಗುಂದ, ಸೇರಿದಂತೆ ಹತ್ತಾರು ಗ್ರಾಮಗಳ ಶೈಕ್ಷಣಿಕ ಬೆಳವಣಿಗೆಗೆ ತನ್ನದೆ ಕೊಡುಗೆ ನೀಡಿ ಗಮನ ಸೆಳೆದಿದೆ.
ನಗರ ಪ್ರದೇಶದಲ್ಲಿ ಮಾರಿಗೊಂದು ಶಾಲೆಗಳಿದ್ದರೆ ಗ್ರಾಮೀಣ ಭಾಗದಲ್ಲಿ ಸುತ್ತಲಿನ ಹತ್ತಾರು ಕಿ.ಮೀ. ವರೆಗೂ ಇದುವೇ ಜ್ಞಾನಕೇಂದ್ರ. ಈ ಶಾಲೆಯಲ್ಲಿ ಕಲಿತ ಅದೆಷ್ಟೋ ಮಂದಿ ಸಮಾಜದ ಉನ್ನತ ಸ್ಥಾನದಲ್ಲಿದ್ದು, ಶಾಲೆಯ ಕೊಡುಗೆಯನ್ನು ಇಂದಿಗೂ ಸ್ಮರಿಸುತ್ತಾರೆ.
ಶಾಲೆಬಗ್ಗೆ ಮಾಹಿತಿ: ಮೂಲ ಸೌಕರ್ಯದಿಂದ ದೂರ ಉಳಿದಿದ್ದ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಹೈಸ್ಕೂಲು ಮೆಟ್ಟಲೇರಬೇಕು ಎಂದಾದರೆ ದೂರದ ತೀರ್ಥಹಳ್ಳಿಗೆ ಹೋಗಬೇಕಾದ ಸ್ಥಿತಿಯಿದ್ದ ಕಾಲದಲ್ಲಿ ಸ್ಥಳೀಯರಾದ ರಾಮಪ್ಪಗೌಡ, ಶ್ರೀನಿವಾಸ ಜೋಯ್ಸ್, ಜೋಗಪ್ಪ ಭಂಡಾರಿ ಮತ್ತು ಹಲವರ ಶ್ರಮದ ಫಲವಾಗಿ 1963ರಲ್ಲಿ ಯಡೂರಿಗೆ ಪ್ರೌಢಶಾಲೆ ಬರುವಂತಾಯ್ತು.
ಜಿಪಂ ಸದಸ್ಯರಾಗಿ ಸರಳ ಸಜ್ಜನಿಕೆಗೆ ಹೆಸರಾಗಿದ್ದ ದಿ. ಹಿರಿಯಣ್ಣಗೌಡರಿಂದ ಹಿಡಿದು ಚಿತ್ರರಂಗದ ಖ್ಯಾತ ಸಾಹಿತಿ ಕವಿರಾಜ್ ಕೂಡಾ ಇಲ್ಲಿಯೇ ವ್ಯಾಸಂಗ ಮಾಡಿದ್ದು. ವಾರಾಹಿ ಯೋಜನೆ ಕಾರ್ಯಾಗತವಾಗುವ ಸಂದರ್ಭದಲ್ಲಿ 300ಕ್ಕು ಹೆಚ್ಚು ವಿದ್ಯಾರ್ಥಿಗಳು ಇಲ್ಲಿದ್ದರು.
ಪ್ರಸ್ತುತ 100ಕ್ಕು ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಗ್ರಾಮೀಣ ಶಾಲೆಯಾದರು ಎಸ್ಸೆಸ್ಸೆಲಿಯಲ್ಲಿ ಎರಡು ಬಾರಿ ಶೇ.100 ಫಲಿತಾಂಶ ದಾಖಲಿಸಿ ಗಮನ ಸೆಳೆದಿದೆ. ಗ್ರಾಮೀಣ ಶಾಲೆಯಾದರೂ ಸ್ಥಳೀಯರ, ದಾನಿಗಳ ಕೊಡುಗೆಗೆ ಇಲ್ಲಿ ಬರವಿಲ್ಲ.
ಮುಂಬೈನ ಮಂಜುನಾಥ ಪೂಜಾರಿ, ಬೆಂಗಳೂರಿನ ನಂಜೆಗೌಡ, ಸುಭಾಶ್ಚಂದ್ರ, ಹಿರಿಯ ವೈ.ವಿ. ಭಾಸ್ಕರ ಜೋಯ್ಸ್, ಉದಯಗೌಡ ಸೇರಿದಂತೆ ಅನೇಕರು ಉತ್ತಮ ಶಿಕ್ಷಣಕ್ಕೆ ಉತ್ತೇಜನ ನೀಡುವ ಸಂಬಂಧ ಪ್ರತಿವರ್ಷ ವಿವಿಧ ಕೊಡುಗೆ ನೀಡುತ್ತಾ ಬಂದಿದ್ದಾರೆ. ಶಾಸಕ ಕಿಮ್ಮನೆ ರತ್ನಾಕರ್ಕೂಡ ಶೇ.100 ಪಲಿತಾಂಶ ತಂದ ವಿದ್ಯಾರ್ಥಿಗಳಿಗೆ ತಲಾ 1,000 ನಗದು ಪುರಸ್ಕಾರ ನೀಡಿದ್ದಾರೆ.
5 ಎಕರೆ ಶಾಲಾ ಪ್ರದೇಶದಲ್ಲಿ ಗಾಳಿಮರ ನೆಟ್ಟು ಅದರಿಂದ ರು. 3 ಲಕ್ಷ ಆದಾಯ ಪಡೆದುಕೊಂಡಿದ್ದು, ಪ್ರಸ್ತುತ ಅಕೇಶಿಯಾ ನೆಡುತೋಪು ನಿರ್ಮಾಣ ಮಾಡಲಾಗಿದೆ.
ಕೊರತೆ: ಗ್ರಾಮಸ್ಥರ ಸಹಕಾರದ ನಡುವೆಯೂ ಸದರಿ ಶಾಲೆ ಹಲವು ಕೊರತೆ ಎದುರಿಸುತ್ತಿದೆ. ಕಾಂಪೌಂಡ್ ಪೂರ್ಣಗೊಂಡಿಲ್ಲ. ಸ್ವಂತ ಬಾವಿ ಇಲ್ಲ. ಡಿ.ದರ್ಜೆ ನೌಕರ ಇಲ್ಲ. ಸಂಗೀತ ಶಿಕ್ಷಕರ ಕೊರತೆಗೆ ಕೊನೆಯಿಲ್ಲ.
-ರವಿ ಬಿದನೂರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.