ಮಹಿಳಾ ಆಯೋಗಕ್ಕೆ ಪ್ರೋತ್ಸಾಹವಿಲ್ಲ
ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಮಹಿಳಾ ಆಯೋಗಕ್ಕೆ ಯಾವುದೇ ಪ್ರೋತ್ಸಾಹವಿಲ್ಲ. ಈ ಹಿನ್ನೆಲೆಯಲ್ಲಿ ನಾವು ಅನಿವಾರ್ಯವಾಗಿ ರಾಜಿನಾಮೆ ನೀಡಬೇಕಾಗಿತ್ತು ಎಂದು ಮಹಿಳಾ ಆಯೋಗದ ಮಾಜಿ ಸದಸ್ಯೆ ಹಾಗೂ ಕೆಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಿ.ಎನ್. ಗಾಯತ್ರಿದೇವಿ ಬೇಸರ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಆಯೋಗಕ್ಕೆ ರಾಜಿನಾಮೆ ನೀಡಿರುವುದರ ಹಿಂದೆ ಯಾವುದೇ ದುರುದ್ದೇಶವಿಲ್ಲ. ರಾಜ್ಯ ಸರ್ಕಾರ ಮಹಿಳಾ ಆಯೋಗಕ್ಕೆ ನೀಡಬೇಕಾದ ಸೌಕರ್ಯಗಳನ್ನು ನೀಡಲು ನಿರಾಕರಿಸಿದ್ದರಿಂದ ರಾಜಿನಾಮೆ ನೀಡುವುದು ಅನಿವಾರ್ಯವಾಗಿತ್ತು ಎಂದರು.
ನೆರವು ನೀಡಿಲ್ಲ: ಮೈಸೂರಿನಲ್ಲಿ ಮಹಿಳೆ ಮತ್ತು ಯುವತಿಯರ ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದರೂ ಸರ್ಕಾರದ ಮಂತ್ರಿಗಳು ಸ್ಪಂದಿಸಲಿಲ್ಲ. ಮಹಿಳೆ ಮತ್ತು ಯುವತಿಯರಿಗೆ ಪುನರ್ವಸತಿ ನೀಡಲು ಸರ್ಕಾರ ಅನುವು ಮಾಡಿಕೊಡಲಿಲ್ಲ ಎಂದು ಆರೋಪಿಸಿದರು. ಮಹಿಳಾ ಆಯೋಗದ ಅಧಿಕಾರದ ಅವಧಿ ಇನ್ನೂ ಒಂದು ವರ್ಷವಿತ್ತು. ಅದನ್ನು ಪೂರೈಸುವ ಆಲೋಚನೆಯು ಇತ್ತು. ಆದರೆ, ಈ ಬಾರಿಯ ಬಜೆಟ್‌ನಲ್ಲಿ ಮಹಿಳಾ ಆಯೋಗಕ್ಕೆ ಯಾವುದೇ ಆರ್ಥಿಕ ನೆರವು ನೀಡದಿರುವುದರಿಂದ ರಾಜಿನಾಮೆ ನೀಡಿದ್ದೇವೆ ಎಂದ ಅವರು, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಮಹಿಳಾ ಆಯೋಗದ ಮೇಲೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದವು ಎಂದರು.
ಕೆಜೆಪಿ ಮುಖಂಡ ಪುರುಷೋತ್ತಮ್ ಮಾತನಾಡಿ, ಈ ಬಾರಿಯ ಬಜೆಟ್‌ನಲ್ಲಿ ರಾಜ್ಯದ ಇತರೆಡೆ 44 ತಾಲೂಕುಗಳನ್ನು ಹೊಸದಾಗಿ ಮಾಡಿದ್ದಾರೆ. ಆದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ತಾಲೂಕುಗಳು ಆಗದಿರುವುದು ಬೇಸರ ತಂದಿದೆ. ಇದ್ದರಿಂದ ಸ್ಥಳೀಯ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆ ಕಾಣುತ್ತಿದೆ ಎಂದರು.
ಜಿಲ್ಲೆಯವರೆ ಆದ ಡಿಸಿಎಂ ಈಶ್ವರಪ್ಪ ಅವರು ತಮ್ಮ ಒಡೆತನದ ಶ್ರೀಗಂಧ ಸಂಸ್ಥೆಗೆ 1 ಕೋಟಿ ಹಣ ತಂದಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮಾರ್ವಿಕವಾಗಿ ನುಡಿದರು.
ಫೆ.10ರಂದು ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಚಾಲನೆ ನೀಡುತ್ತಿದ್ದಾರೆ. ಆದರೆ, ಕಾರ್ಯಕ್ರಮಗಳಿಗೆ ಬಿಎಸ್‌ವೈ ಅವರನ್ನು ಕರೆಯುವಂತೆ ಬಿಜೆಪಿ ನಾಯಕರಿಗೆ ಹೇಳಲು ಸಾಧ್ಯವಿಲ್ಲ ಎಂದರು. ಗೋಷ್ಠಿಯಲ್ಲಿ ಸುಧಾಮಣಿ, ಶೋಭಾ ಶೇಖರ್ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.