ಕಾನೂನುಬಾಹಿರ ನಿವೇಶನ ಹಂಚಿಕೆ: ಸಿಎಂಗೆ ಮನವಿ
ಶಿವಮೊಗ್ಗ: ನಗರದ ಸಾಗರ ರಸ್ತೆಯ ಆಟೋ ಕಾಂಪ್ಲೆಕ್ಸ್‌ನಲ್ಲಿ ಕಾನೂನುಬಾಹಿರವಾಗಿ ಹಂಚಿಕೆ ಮಾಡಲಾಗಿರುವ ಮೂರು ನಿವೇಶನ ರದ್ದುಪಡಿಸುವಂತೆ ಆಗ್ರಹಿಸಿ ಭಾನುವಾರ ಗ್ಯಾರೇಜ್ ಮತ್ತು ಎಂಜಿನಿಯರಿಂಗ್ ವರ್ಕ್‌ಶಾಪ್ ಅಸೋಸಿಯೇಷನ್ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ ಮನವಿ ಅರ್ಪಿಸಿತು.
ಪ್ರಸ್ತುತ ವ್ಯಕ್ತಿಯೊಬ್ಬರಿಗೆ 3 ನಿವೇಶನ ಹಂಚಿಕೆ ಮಾಡಲಾಗಿದೆ. ಆದರೆ ಈ ವ್ಯಕ್ತಿಗೆ ಈಗಾಗಲೇ ಆಟೋ ಕಾಂಪ್ಲೆಕ್ಸ್‌ನಲ್ಲಿ ಎರಡು ನಿವೇಶನವಿದೆ. ಆದಾಗ್ಯೂ ಇದೇ ವ್ಯಕ್ತಿಗೆ ಮತ್ತೆ ನಿವೇಶನ ಮಂಜೂರು ಮಾಡಿರುವ ಕೆಐಎಡಿಬಿ ಅಧಿಕಾರಿಗಳ ಕ್ರಮ ಕಾನೂನುಬಾಹಿರವಾಗಿದೆ ಎಂದು ಮನವಿ ಸಲ್ಲಿಸಿದ ಅಸೋಸಿಯೇಷನ್ ಪ್ರತಿನಿಧಿಗಳು ತಿಳಿಸಿದರು.
ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕಾನೂನುಬಾಹಿರವಾಗಿ ಕೆಐಎಡಿಬಿ ಅಧಿಕಾರಿಗಳು ನಿವೇಶನ ಮಂಜೂರು ಮಾಡಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಕೈಗಾರಿಕೋದ್ಯಮಿಗಳಿಗೆ ಮಾಡಿದ ಅನ್ಯಾಯವಾಗಿದೆ ಎಂದು ಮನವಿಯಲ್ಲಿ ಆಪಾದಿಸಲಾಗಿದೆ.
ಪ್ರಸ್ತುತ ಗ್ಯಾರೇಜ್ ಮತ್ತು ಎಂಜಿನಿಯರಿಂಗ್ ವರ್ಕ್‌ಶಾಪ್ ಅಸೋಸಿಯೇಷನ್ ಮೂಲಕ ನಿವೇಶನ ಕೋರಿ ಅರ್ಹ ಮೆಕಾನಿಕ್‌ಗಳು ಕೆಐಎಡಿಬಿಗೆ ಅರ್ಜಿ ಸಲ್ಲಿಸಿದ್ದಾರೆ. ಕಾನೂನು ಪ್ರಕಾರ ಮುಂಗಡ ಹಣ ಪಾವತಿ ಮಾಡಿದ್ದಾರೆ. ಆದರೆ ಈವರೆಗೂ ನಿವೇಶನ ಹಂಚಿಕೆ ಮಾಡದೆ ಮೀನಮೇಷ ಎಣಿಸಲಾಗುತ್ತಿದೆ. ರಾಜಕೀಯ ಒತ್ತಡಕ್ಕೆ ಮಣಿದು ಅಕ್ರಮವಾಗಿ ಅನರ್ಹ ವ್ಯಕ್ತಿಗಳಿಗೆ ನಿವೇಶನ ಹಂಚಿಕೆ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಕೂಡಲೇ ಈ ಕುರಿತು ಕೆಐಎಡಿಬಿ ಅಧಿಕಾರಿಗಳ ಉನ್ನತ ಮಟ್ಟದ ಸಭೆ ಕರೆದು ಚರ್ಚೆ ನಡೆಸಬೇಕು. ಕಾನೂನು ಬಾಹಿರವಾಗಿ ಹಂಚಿಕೆ ಮಾಡಿರುವ ನಿವೇಶನ ರದ್ದುಗೊಳಿಸಬೇಕು. ಈಗಾಗಲೇ ಕಾನೂನು ಪ್ರಕಾರ ಅರ್ಜಿ ಸಲ್ಲಿಸಿ ಮುಂಗಡ ಹಣ ಕಟ್ಟಿರುವ ಅರ್ಹ ಮೆಕ್ಯಾನಿಕ್‌ಗಳಿಗೆ ನಿವೇಶನ ಮಂಜೂರು ಮಾಡಬೇಕು ಎಂದು ಅಸೋಸಿಯೇಷನ್ ಒತ್ತಾಯಿಸಿದೆ. ಪದಾಧಿಕಾರಿಗಳಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.