ಜಿಲ್ಲಾ ಅಭಿವೃದ್ಧಿ ಕ್ರೆಡಿಟ್ ಈಶ್ವರಪ್ಪರಿಗೆ ಕೊಟ್ಟ ಸಿಎಂ
ಶಿವಮೊಗ್ಗ: ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿ ಅಭಿವೃದ್ಧಿಯ ಎಲ್ಲಾ ಕ್ರೆಡಿಟ್ ಸೇರಬೇಕಾದ್ದು ಮತ್ಯಾರಿಗೂ ಅಲ್ಲ, ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ.
ಈ ಸರ್ಟಿಫಿಕೆಟ್ ಕೊಟ್ಟಿದ್ದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್. ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು 206 ಕೋಟಿ ರು. ಮೊತ್ತದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ-ಉದ್ಘಾಟನೆ ನೆರವೇರಿಸಿದ ಸಂದರ್ಭ. ಮುಖ್ಯಮಂತ್ರಿಯಾದ ನಂತರ ಜಿಲ್ಲೆಗೆ ಅವರದು ಎರಡನೇ ಭೇಟಿ. ಆದರೆ ಬಹಿರಂಗ ಸಭೆಯಲ್ಲಿ ಮಾತನಾಡಿದ್ದು ಇದೇ ಮೊದಲ ಬಾರಿ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಅವರು ಕಂದಾಯ ಸಚಿವರಾಗಿ ಜಿಲ್ಲೆಗೆ ಬಂದಿದ್ದರು.
ಬದಲಾವಣೆ: ನಾನು ಐದು ವರ್ಷದ ಹಿಂದೆಯೂ ಶಿವಮೊಗ್ಗ ಜಿಲ್ಲೆಗೆ ಬಂದಿದ್ದೇನೆ. 10 ವರ್ಷದ ಹಿಂದೆಯೂ ಬಂದಿದ್ದೆ. 20 ವರ್ಷದ ಹಿಂದೆಯೂ ಬಂದಿದ್ದೆ. ಅವತ್ತು ಹೇಗಿತ್ತು, ಇವತ್ತು ಹೇಗಿದೆ ಎಂಬ ಬದಲಾವಣೆಯನ್ನು ನೀವೇ ನೋಡ್ತಿದ್ದೀರಿ. ಇದಕ್ಕೆ ಮೂಲಕ ಕಾರಣ ನಿಮ್ಮೆಲ್ಲರ ನೆಚ್ಚಿನ ಶಾಸಕ ಕೆ.ಎಸ್. ಈಶ್ವರಪ್ಪ ಅವರು. ಈ ಸಂದರ್ಭದಲ್ಲಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು. ನಾನು ಮುಖ್ಯಮಂತ್ರಿಯಾದಾಗಿನಿಂದ 15-20 ಸಂಪುಟ ಸಭೆಗಳನ್ನು ಮಾಡಿರಬಹುದು. ಎಲ್ಲಾ ಸಭೆಗಳಲ್ಲಿಯೂ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಒಂದು ಅಜೆಂಡ ಇದ್ದೇ ಇರುತ್ತಿತ್ತು. ಶಿವಮೊಗ್ಗ ಅಜೆಂಡ ಇಲ್ಲದೇ ಸಭೆ ನಡೆಯುವುದಿಲ್ಲವೇ ಎಂದು ಸಂಪುಟ ಸಹೋದ್ಯೋಗಿಗಳು ಕೇಳುತ್ತಿದ್ದುದೂ ಉಂಟು ಎಂದರು.
ಫ್ಲೈಓವರ್: ಶಿವಮೊಗ್ಗ ಜಿಲ್ಲೆಗೆ ಬಜೆಟ್ನಲ್ಲಿ ಹೆಚ್ಚು ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಜಿಲ್ಲೆಗೆ ಬೇಕಾದ ಅನುದಾನವನ್ನು ಬಜೆಟ್ಗಿಂತ ಮುಂಚೆಯೇ ಸಂಪುಟ ಸಭೆಗಳಲ್ಲಿ ಉಪಮುಖ್ಯಮಂತ್ರಿ ಈಶ್ವರಪ್ಪ ಅವರು ಪಡೆದುಕೊಂಡಿದ್ದಾರೆ ಎಂದು ಶ್ಲಾಘಿಸಿದರು. ನಮ್ಮ ಹುಬ್ಳಿ ಜನಸಂಖ್ಯೆ ಏಳುವರೆ ಲಕ್ಷ. ಅಲ್ಲಿಯೇ ಇನ್ನೂ ಫ್ಲೈಓವರ್ ಮಾಡಲು ಆಗಿಲ್ಲ. ಇಲ್ಲಿ ಈಗ ಉದ್ಘಾಟನೆ ಮಾಡಿದ್ದೇನೆ. ಈಗ ಅಲ್ಲಿ ಜನ ನನಗೆ ಕೇಳ್ತಾರೆ ಎಂದು ನಗುತ್ತಾ ನುಡಿದರು.
ಕೇಳಲು ಬಾಯಿ ಇಲ್ಲ: ಜಿಲ್ಲೆಗೆ ಬಜೆಟ್ನಲ್ಲಿ ಏನಾದರೂ ಕೊಡಿ ಎಂದು ಕೇಳಲು ನನಗೆ ಬಾಯಿ ಇರಲಿಲ್ಲ ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಕೇಳುವುದಕ್ಕೆ ಮುಂಚೆಯೇ ಅವರು ಜಿಲ್ಲೆಗೆ ಬೇಕಾದ ಯೋಜನೆಯನ್ನು ಬಜೆಟ್ ಮುಂಚೆಯೇ ಮಾಡಿದ್ದಾರೆ. ಅವರನ್ನು ನಾನು ಜೀವವಿರುವ ವರೆಗೂ ನೆನಪಿಟ್ಟುಕೊಳ್ಳುತ್ತೇನೆ. ಅವರು ಪುಣ್ಯಾತ್ಮ ಎಂದು ಗುಣಗಾನ ಮಾಡಿದರು.
ಶನಿವಾರ ಮಂಡಿಸಿದ ಬಜೆಟ್ನಲ್ಲಿ ಜಿಲ್ಲೆಗೆ ನೀಡಿದ ಕೊಡುಗೆಗಳನ್ನು ಪಟ್ಟಿ ಮಾಡಿದ ಅವರು ತಮ್ಮ ಅಧ್ಯಕ್ಷತೆಯ ಶ್ರೀಗಂಧ ಸಂಸ್ಥೆಗೆ ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ ಹಾಗೂ ಉಚಿತ ಆರೋಗ್ಯ ಶಿಬಿರ ಆಯೋಜನೆಗಾಗಿ 1 ಕೋಟಿ ರು. ಅನುದಾನ ಘೋಷಿಸಿರುವುದನ್ನೂ ಸ್ಮರಿಸಿದರು.
ತುಮರಿ ಸೇತುವೆ: ಈ ಹಿಂದೆ ಬಜೆಟ್ನಲ್ಲಿ ತುಮರಿ ಸೇತುವೆ ಘೋಷಿಸಿದವರು ಹಣ ಬಿಡುಗಡೆ ಮಾಡಲೇ ಇಲ್ಲ. ಈ ಬಜೆಟ್ನಲ್ಲಿ ನೀಡಿದ್ದೇವೆ ಎಂದರು. ಮೆಗ್ಗಾನ್ ಆಸ್ಪತ್ರೆಯ 157 ನೌಕರರನ್ನು ಖಾಯಂ ಮಾಡುವುದು, ಅಲ್ಲಿ ಕ್ಯಾನ್ಸರ್ ಘಟಕ ಆರಂಭಿಸುವುದಕ್ಕೂ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ ಎಂದರು.
ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ರಾಜಕೀಯ ಶಾಂತಿ ನೆಲೆಸಿದೆ ಎಂದರು.
ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಶಾಸಕರಾದ ಕೆ.ಜಿ. ಕುಮಾರಸ್ವಾಮಿ, ಗೋಪಾಲಕೃಷ್ಣ ಬೇಳೂರು, ಕಿಮ್ಮನೆ ರತ್ನಾಕರ್, ನಗರಸಭಾಧ್ಯಕ್ಷ ಚನ್ನಬಸಪ್ಪ, ಸೂಡಾ ಅಧ್ಯಕ್ಷ ದತ್ತಾತ್ರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ್, ಡಿಸಿ ವಿಪುಲ್ ಬನ್ಸಾಲ್, ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಾಂತ್ ಸೆಂಥಿಲ್ ಇದ್ದರು.
ಮುಖ್ಯಮಂತ್ರಿಗಾಗಿ ಕಾದು ಸಾಕಾದ ಜನ
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ನಿಗದಿಯಂತೆ ಕಾರ್ಯಕ್ರಮಕ್ಕೆ ಬೆಳಿಗ್ಗೆ 9.30ಕ್ಕೇ ಬರಬೇಕಿತ್ತು. ಆದರೆ ಕಾರ್ಯಕ್ರಮ ಶುರುವಾಗಿದ್ದು 11ರ ನಂತರ. ಬೆ.8.30ರಿಂದ ಉಪಹಾರವಿಲ್ಲದೇ ಕಾಯುತ್ತಿದ್ದ ಜನರು ಹೈರಾಣಾಗಿದ್ದರು. ತಿಂಡಿ ವ್ಯವಸ್ಥೆ ಇದ್ದರೂ ಕಾರ್ಯಕ್ರಮದ ನಡುವೆ ಎದ್ದು ಹೋಗಲು ಆಯೋಜಕರು ಬಿಡುತ್ತಿರಲಿಲ್ಲ. ಹಾಗಾಗಿ ಮುಖ್ಯಮಂತ್ರಿ ಭಾಷಣ ಆರಂಭವಾಗುವುದಕ್ಕಿಂತ ಮುಂಚೆಯೇ ಬಹಳಷ್ಟು ಜನರು ಎದ್ದು ಹೋಗುತ್ತಿದ್ದರು. ಕಾರ್ಯಕ್ರಮದಲ್ಲಿ ಮತನಾಡಿದ್ದು ಈಶ್ವರಪ್ಪ, ಶಂಕರಮೂರ್ತಿ, ಶೆಟ್ಟರ್ ಮಾತ್ರ. ಆಯನೂರಿನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವಿದ್ದರಿಂದ ಬೇರೆಯವರಿಗೆ ಮಾತನಾಡಲು ಆಗಲಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.