ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಮುದಾಯಕ್ಕೆ ಆದ್ಯತೆ ನೀಡುವವರನ್ನು ಬೆಂಬಲಿಸಿ

Parashurama
Updated On : 11 Feb 2013, 11:16 am

ಭದ್ರಾವತಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಯಾರು ಬ್ರಾಹ್ಮಣ ಸಮುದಾಯಕ್ಕೆ ಆದ್ಯತೆ ನೀಡುತ್ತಾರೋ ಅವರನ್ನು ಪಕ್ಷಾತೀತವಾಗಿ ಬೆಂಬಲಿಸಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಮಾಜಿ ಪ್ರಧಾನ ಕಾರ್ಯದರ್ಶಿ ಆರ್. ಲಕ್ಷ್ಮೀಕಾಂತ್ ಕರೆ ನೀಡಿದರು.
   ನಗರದ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ತಾಲೂಕು ಬ್ರಾಹ್ಮಣ ಸಮಾವೇಶದ 2ನೇ ದಿನವಾದ ಭಾನುವಾರ ಬೆಳಿಗ್ಗೆ ವಿವಿಧ ಗೋಷ್ಠಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಬ್ರಾಹ್ಮಣ ಅಭ್ಯರ್ಥಿಯಿದ್ದರೆ ಅವರನ್ನೇ ಆಯ್ಕೆ ಮಾಡಿ. ಇಲ್ಲವಾದಲ್ಲಿ ಯಾರು ಬ್ರಾಹ್ಮಣ ಸಮುದಾಯವನ್ನು ಬೆಂಬಲಿಸುವರೋ ಅವರನ್ನು ಚುನಾಯಿಸಿ ವಿಪ್ರ ಸಂಘಟನೆಯನ್ನು ಜಾಗೃತಗೊಳಿಸಿ ಎಂದು ತಿಳಿಸಿದರು.
ಬ್ರಾಹ್ಮಣ ಸಂಘಟನೆಯಲ್ಲಿ ಮಹಿಳೆಯ ಪಾತ್ರ ಗೋಷ್ಠಿಯ ಅಧ್ಯಕ್ಷತೆಯನ್ನು ಪತ್ರಕರ್ತೆ ಜಯಶ್ರೀ ಕೆ. ವಿಜಯೇಂದ್ರ ವಹಿಸಿದ್ದರು. ಲಿಂಗದಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.  ದಯಾವತಿ ವಿಷಯ ಪ್ರಸ್ತಾವನೆ ಮಾಡಿದರು.
ಅಖಿಲ ಭಾರತ ಬ್ರಾಹ್ಮಣ ಸಂಘಟನೆಗಳ ಒಕ್ಕೂಟದ ಉಪಾಧ್ಯಕ್ಷೆ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ  ಮಹಾಸಭಾದ ಸಹಕಾರ್ಯದರ್ಶಿ ಎನ್. ಮಾಲಿನಿ ವಿಷಯ ಕುರಿತು ಮಾತನಾಡಿದರು. ಸಾಗರ ತಾಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷೆ ಶರಾವತಿ ಸಿ. ರಾವ್ ಉಪಸ್ಥಿತರಿದ್ದರು.  
ಬ್ರಾಹ್ಮಣ ಯುವಕರ ಸಮಸ್ಯೆಗಳು ಮತ್ತು ಪರಿಹಾರ ಕುರಿತ ಗೋಷ್ಠಿಯಲ್ಲಿ, ಬೆಂಗಳೂರಿನ ವಿಪ್ರ ಸಹಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿ.ಕೆ. ದೀಕ್ಷಿತ್ ನೂತನವಾಗಿ ಪ್ರಾರಂಭಿಸಿರುವ viprahelpline.org  viprajobs.comವೆಬ್‌ಸೈಟ್‌ಗಳ ಬಗ್ಗೆ ಮಾಹಿತಿ ನೀಡಿದರು.
ತಾಲೂಕು ಬ್ರಾಹ್ಮಣ ಸಭಾದ ಗೌರವಾಧ್ಯಕ್ಷ ಡಾ. ಹರೀಶ ದೇಲಂತಬೆಟ್ಟು ವಿಪ್ರ ಸಹಾಯ ಪ್ರತಿಷ್ಠಾನ ನೂತನವಾಗಿ ಬಿಡುಗಡೆಗೊಳಿಸಿದ vipramangalya.comವೆಬ್‌ಸೈಟ್‌ನ್ನು ಬಿಡುಗಡೆ ಮಾಡಿದರು.   
ನಮ್ಮೊಳಗಿನ ಪುರಾಣ ಪಾತ್ರಗಳು ವಿಷಯ ಕುರಿತಂತೆ ಬೆಂಗಳೂರಿನ ಹಾಸ್ಯ ಕಲಾವಿದ ವೈ.ವಿ. ಗುಂಡುರಾವ್, ಪೌರಾಣಿಕ ಪಾತ್ರಗಳಲ್ಲಿ ಚಿತ್ರಿತವಾಗಿರುವ ಆದರ್ಶಗಳು ಮತ್ತು ಪಾಲಿಸಬೇಕಾಗಿರುವ ತತ್ವಗಳನ್ನು ಹಾಸ್ಯಲೇಪಿತ ತಾತ್ವಿಕ ಅರ್ಥಗಳೊಂದಿಗೆ ಪ್ಷೇಕ್ಷಕರಿಗೆ ವಿವರಿಸಿದರು.
ಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಾ.ಬಿ. ವೆಂಕಟರಾವ್, ಪ್ರಧಾನ ಕಾರ್ಯದರ್ಶಿ ಡಿ. ಸತ್ಯನಾರಾಯಣ ರಾವ್, ಜಿಲ್ಲೆಯ ತಾಲೂಕು ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳು, ರಾಜಲಕ್ಷ್ಮಿ, ಪ್ರಭಾಕರ ಜೋಯಿಸ್ ಮತ್ತಿತರರು ಇದ್ದರು.
ಆತ್ಮವಲೋಕನ ಅಗತ್ಯ ಸಮಾವೇಶದಲ್ಲಿ ಏನು ನಡೆಯಿತು ಮತ್ತು ಅದರ ಗುರಿ ಏನು ಎಂದು ಆತ್ಮಾವಲೋಕನ ಮಾಡಿಕೊಂಡಾಗ ಮಾತ್ರ ಸಮಾವೇಶ ನಡೆಸಿದ್ದು ಸಾರ್ಥಕವಾಗುತ್ತದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ  ಮಹಾಸಭಾದ ಅಧ್ಯಕ್ಷ ಬೆಂಗಳೂರಿನ ಡಾ.ಬಿ.ಎನ್.ವಿ. ಸುಬ್ರಹ್ಮಣ್ಯ ನುಡಿದರು.
 ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡುತ್ತಾ, ಇದುವರೆಗೆ ಎಂಟು ರಾಜ್ಯ ಸಮ್ಮೇಳನಗಳಾಗಿವೆ. ಹಲವಾರು ಜಿಲ್ಲಾ ಹಾಗೂ ತಾಲೂಕು ಸಮಾವೇಶಗಳಾಗಿವೆ. ಇವೆಲ್ಲಾ ನಡೆದೂ ಯಾವುದೇ ಫಲಶೃತಿ ದೊರಕದಿದ್ದರೆ ನಾವು ಎಲ್ಲಿಂದ ಪ್ರಾರಂಭಿಸಿದ್ದೆವೋ ಅಲ್ಲಿಯೇ ಇದ್ದೇವೆಂಬ ಅರ್ಥ ಬರುತ್ತದೆ. ಆದ್ದರಿಂದ ಪ್ರತಿಯೊಂದು ಸಮಾವೇಶದ ಅಂತ್ಯದಲ್ಲಿ ಅದರ ಫಲಶೃತಿ ಮುಖ್ಯವೆಂದು ಒತ್ತಿ ಹೇಳಿದರು.
ಬೆಂಗಳೂರಿನಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನಿರ್ಮಿಸುತ್ತಿರುವ ಮಹಿಳೆಯರ ಹಾಸ್ಟೆಲ್‌ಗೆ ಈ ಸಂದರ್ಭದಲ್ಲಿ ಸ್ಥಳದಲ್ಲಿಯೇ ಸಭಿಕರಿಂದ ರು. 25000 ದೇಣಿಗೆ ಸಂಗ್ರಹಿಸಿ ಬಿ.ಎನ್.ವಿ. ಸುಬ್ರಹ್ಮಣ್ಯ ಅವರಿಗೆ ನೀಡಲಾಯಿತು.
ಸ್ಮರಣ ಸಂಚಿಕೆ ಬಿಡುಗಡೆ: ಮಹಾಸಭಾದ ಉಪಾಧ್ಯಕ್ಷ ಕೆ. ದಿವಾಕರ ಸಮಾವೇಶದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
  ಮಹಾಸಭಾದ ಮತ್ತೊಬ್ಬ ಉಪಾಧ್ಯಕ್ಷ ಎಲ್. ತಿಮ್ಮಪ್ಪ ಹೆಗ್ಗಡೆ, ಮಾಜಿ ಉಪಾಧ್ಯಕ್ಷ ಎ.ಎಸ್. ಜಯಸಿಂಹ,  ಸಂಘಟನಾ ಕಾರ್ಯದರ್ಶಿ ಮ.ಸ. ನಂಜುಂಡಸ್ವಾಮಿ, ಜಂಟಿ ಕಾರ್ಯದರ್ಶಿ ಅಬಸೆ ದಿನೇಶ್‌ಕುಮಾರ್ ಜೋಷಿ ಮತ್ತು ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಖಜಾಂಚಿ ಪ್ರಸನ್ನ ಕುಮಾರ್ ಈ ಸಂದರ್ಭ ಉಪಸ್ಥಿತರಿದ್ದು ಮಾತನಾಡಿದರು. ತಾಲೂಕು ಬ್ರಾಹ್ಮಣ ಸಭಾದ ಗೌರವಾಧ್ಯಕ್ಷ ಡಾ. ಹರೀಶ ದೇಲಂತಬೆಟ್ಟು ವೇದಿಕೆಯಲ್ಲಿದ್ದರು. ಸಮಾವೇಶದ ಅಧ್ಯಕ್ಷ ಪಿ. ರವಿರಾಜಾಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ವೇದಘೋಷದೊಂದಿಗೆ ಸಮಾರೋಪ ಸಮಾರಂಭ ಪ್ರಾರಂಭವಾಯಿತು. ಪದ್ಮಿನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸುಧಾ ಶಿವಕುಮಾರ್ ಮತ್ತು ಎಚ್.ಎನ್. ಸುಬ್ರಮಣ್ಯ ಕಾರ್ಯಕ್ರಮ ನಿರೂಪಿಸಿದರು.  ಜನಾರ್ದನ ಅಯ್ಯಂಗಾರ್ ಸಮಾವೇಶದ ನಿರ್ಣಯಗಳನ್ನು ಮಂಡಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments