'ಹೊಳೆಹೊನ್ನೂರನ್ನು ತಾಲೂಕಾಗಿ ಘೋಷಿಸಿ'
ಶಿವಮೊಗ್ಗ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹೊಳೆಹೊನ್ನೂರು ತಾಲೂಕು ಹೋರಾಟ ಸಮಿತಿ ಕಾರ್ಯಕರ್ತರು ಭಾನುವಾರ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದ್ದು, ಇದರಿಂದ ರೈತನ ಜಮೀನು ಹಾಗೂ ದನಕರುಗಳಿಗೆ ನೀರು ಸಿಗುತ್ತಿಲ್ಲ. ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ಆದ್ದರಿಂದ ಕನಿಷ್ಠ ಹಗಲು 9ಗಂಟೆ 3 ಫೇಸ್, 12 ಗಂಟೆ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ಬೆಲೆ ನಿಗದಿ: ಕಬ್ಬಿಗೆ ಶಾಸನಬದ್ಧ ಬೆಲೆ ನಿಗದಿ ಕಾಯ್ದೆ ಜಾರಿ ಮಾಡಬೇಕು. ಕೃಷಿ ಕಾರ್ಮಿಕರಿಗೆ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಎತ್ತಿನ ಗಾಡಿ ಸಹಾಯಧನಕ್ಕೆ ಬ್ಯಾಂಕ್ ಮುಖಾಂತರ ಸಾಲ ಮಂಜೂರು ಮಾಡಿ ಶೇ.50ರಷ್ಟು ಸಹಾಯಧನ ನೀಡಬೇಕು. ಬರಗಾಲದಿಂದ ತತ್ತರಿಸುವ ಕೃಷಿ ಕಾರ್ಮಿಕರು, ಸಣ್ಣ ಹಿಡುವಳಿದಾರರಿಗೆ ಉಚಿತವಾಗಿ ತರಕಾರಿ ಬೀಜ, ಗೊಬ್ಬರ, ಕೀಟನಾಶಕಗಳನ್ನೊಳಗೊಂಡ ಕಿಟ್ ವಿತರಿಸಲು ಸರ್ಕಾರದಿಂದ ಅನುವು ಮಾಡಿಕೊಡಬೇಕು ಎಂದು ರೈತರು ಒತ್ತಾಯಿಸಿದರು.
ತಾಲೂಕಾಗಲಿ: ಹೊಳೆಹೊನ್ನೂರನ್ನು ತಾಲೂಕು ಕೇಂದ್ರವಾಗಿ ಪರಿವರ್ತಿಸಬೇಕು ಎಂದು ಹೊಳೆಹೊನ್ನೂರು ಹೋರಾಟ ಸಮಿತಿ ಆಗ್ರಹಿಸಿದೆ. ಈ ಭಾಗ ತಾಲೂಕು ಕೇಂದ್ರ ಆಗದಿರುವುದರಿಂದ ಇಲ್ಲಿನ ಜನರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ಅಲ್ಲದೇ ಇಲ್ಲಿಗೆ ಬರಬೇಕಾದ ಸರ್ಕಾರದ ಕೆಲ ಯೋಜನೆ ಬರುತ್ತಿಲ್ಲ. ಈ ಭಾಗದ ಜನರು ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ ಎಂದು ಸಮಿತಿ ಸದಸ್ಯರು ಆರೋಪಿಸಿದರು.
ಬಜೆಟ್ನಲ್ಲಿ 43 ತಾಲೂಕು ಘೋಷಿಸಲಾಗಿದೆ. ಹೊಳೆಹೊನ್ನೂರು ಭಾಗವನ್ನು ಬಿಟ್ಟು ರಾಜ್ಯದ ಇತರೆ ಪ್ರದೇಶಗಳನ್ನು ತಾಲೂಕು ಪ್ರದೇಶಗಳೆಂದು ಘೋಷಿಸಲಾಗಿದೆ. ಆದ್ದರಿಂದ ಹೊಳೆಹೊನ್ನೂರು ಕೂಡ ತಾಲೂಕು ಕೇಂದ್ರವಾಗಿ ಘೋಷಿಸಿ ಮೂಲ ಸೌಕರ್ಯ ನೀಡಬೇಕೆಂದು ಸಮಿತಿ ಒತ್ತಾಯಿಸಿತು.
ಈ ವೇಳೆ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಕಾರ್ಯದರ್ಶಿ ಹಿಟ್ಟೂರು ರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಶಿವಮೂರ್ತಿ, ವಸಂತ ಕುಮಾರ್, ಹೊಳೆಹೊನ್ನೂರು ಭಾಗದ ರೈತರು, ಸ್ಥಳೀಯರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.