ಶಿರಾಳಕೊಪ್ಪವನ್ನು ತಾ. ಕೇಂದ್ರ ಮಾಡಲು ಆಗ್ರಹ
ಶಿರಾಳಕೊಪ್ಪ: ಶಿಕಾರಿಪುರವನ್ನು ಜಿಲ್ಲಾಕೇಂದ್ರ ಮಾಡಬೇಕು. ಶಿರಾಳಕೊಪ್ಪ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಎಲ್ಲಾ ವ್ಯವಸ್ಥೆ ಕಲ್ಪಿಸಿ ಸೂಕ್ತ ಸಮಯದಲ್ಲಿ ಘೋಷಣೆ ಮಾಡಬೇಕೆಂದಿದ್ದ ಯಡಿಯೂರಪ್ಪಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಉಪ ಮುಖ್ಯಮಂತ್ರಿ ಈಶ್ವರಪ್ಪ ಕುತಂತ್ರ ಮಾಡಿದರು ಎಂದು ತಾಪಂ ಮಾಜಿ ಅಧ್ಯಕ್ಷ ಕೆ. ರೇವಣಪ್ಪ ಹಾಗು ಜಿಲ್ಲಾ ನಾಯಕ ಗುರುಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಶಿರಾಳಕೊಪ್ಪ ಪಟ್ಟಣದಲ್ಲಿ ಸೋಮವಾರ ಶಿರಾಳಕೊಪ್ಪ ಪಟ್ಟಣವನ್ನು ತಾಲೂಕು ಕೇಂದ್ರ ಮಾಡಬೇಕೆಂದು ಕೆಜೆಪಿಯಿಂದ ರಾಜ್ಯ ಸರಕಾರದ ತಾರತಮ್ಯ ನೀತಿ ಪ್ರತಿಭಟಿಸಿ ಬೃಹತ್ ಮೆರವಣಿಗೆ, ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ರೇವಣಪ್ಪ ಮಾತನಾಡಿ, ತಾಲೂಕು ಕೇಂದ್ರವಾಗುವ ಎಲ್ಲ ವ್ಯವಸ್ಥೆಯನ್ನು ಶಿರಾಳಕೊಪ್ಪ ಪಟ್ಟಣದಲ್ಲಿ ಮಾಡಲಾಗಿದೆ. ಹಾಗೆಯೇ ರಾಜ್ಯದಲ್ಲಿ ಶರಣರ ನಾಡೆಂದು ಹೆಸರು ಪಡೆದಿರುವ ಶಿಕಾರಿಪುರ ತಾಲೂಕನ್ನು ಈಶ್ವರಪ್ಪನವರ ಕುತಂತ್ರ ಹಾಗೂ ಸೇಡಿನ ರಾಜಕಾರಣದಿಂದಲೇ ದುರುದ್ದೇಶದಿಂದ ಕೈಬಿಡಲಾಗಿದೆ ಎಂದು ದೂರಿದರು.
ಈಶ್ವರಪ್ಪ ಷಡ್ಯಂತ್ರ: ಗುರುಮೂರ್ತಿ ಮಾತನಾಡಿ, ಶಿವಮೊಗ್ಗದ ಅಭಿವೃದ್ಧಿ ಆದ ನಂತರ ಶಿಕಾರಿಪುರ ಜಿಲ್ಲೆ ಹಾಗು ಶಿರಾಳಕೊಪ್ಪ ತಾಲೂಕು ಕೇಂದ್ರವಾಗಿ ಮಾಡುವ ಉದ್ದೇಶದಿಂದ ಎಲ್ಲಾ ಕಾಲೇಜುಗಳು ಉತ್ತಮ ಜಿಲ್ಲಾ ಆರೋಗ್ಯಕೇಂದ್ರ, ಪೊಲೀಸ್ ಠಾಣೆ, ಜಿಲ್ಲಾ ಮತ್ತು ತಾಲೂಕು ಕೇಂದ್ರಕ್ಕೆ ಬೇಕಾಗುವ ಎಲ್ಲಾ ಕಚೇರಿಗಳನ್ನು ಸಹ ನಿರ್ಮಿಸಿದ್ದಾರೆ. ಈಶ್ವರಪ್ಪನವರ ಷಡ್ಯಂತರದಿಂದ ಶಿಕಾರಿಪುರ ಜಿಲ್ಲೆ ಹಾಗೂ ಶಿರಾಳಕೊಪ್ಪ ತಾಲೂಕಾಗದಂತೆ ತಡೆದರು. ಯಡಿಯೂಪ್ಪನವರಿಗೆ ತಾಲೂಕು ಮಾಡಲು ಬಿಡಲಿಲ್ಲ, ತಾವು ಮಾಡಲಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಡಿ ಅಶೋಕ ಮಾತನಾಡಿ, ಸರ್ಕಾರ ಈಗ ತಾಲೂಕು ಮಾಡುವುದಾಗಿ ಘೋಷಿಸಿರುವ ರಾಜ್ಯದ ಎಲ್ಲ ಪಟ್ಟಣಗಳಿಗಿಂತ ಶಿರಾಳಕೊಪ್ಪದಲ್ಲಿ ತಾಲೂಕು ಆಗುವ ಎಲ್ಲ ಸೌಕರ್ಯಗಳಿದ್ದರೂ ಈಶ್ವರಪ್ಪನವರ ಕಡೆಗಣನೆ ತಾಲೂಕ ಮಾಡದಿರಲು ಕಾರಣ. ಹಾಗೆಯೇ ಶಿರಾಳಕೊಪ್ಪ ತಾಲೂಕನ್ನಾಗಿ ಘೋಷಿಸುವವರೆಗೂ ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಮಾಜಿ ಅಧ್ಯಕ್ಷೆ ಜ್ಯೋತಿರಮೇಶ್ ರವಿ ಶಾನಭೋಗ ಮಾತನಾಡಿದರು. ವಿರಕ್ತಮಠದ ಸಿದ್ದೇಶ್ವರ ದೇವರು ಉಪಸ್ಥಿತರಿದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಜ್ಯ ಸರ್ಕಾರದ ವಿರೋಧಿನೀತಿ ಖಂಡಿಸಿ ಮೆರವಣಿಗೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಡಿಸಿಸಿ ಬ್ಯಾಂಕ ಚೆನ್ನವೀರಪ್ಪ, ಎಪಿಎಂಸಿ ಅಧ್ಯಕ್ಷ ಸಣ್ಣ ಹನುಮಂತಪ್ಪ, ಭೂಕಾಂತ, ತಾಲೂಕು ಕೆಜಿಪಿ ಅಧ್ಯಕ್ಷ ರುದ್ರಪ್ಪಯ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ನಿವೇದಿತಾ ರಾಜು, ಜಿಪಂ ಸದಸ್ಯ ಬಂಗಾರ ನಾಯ್ಕ್, ಪಪಂ ಅಧ್ಯಕ್ಷರು ಸದಸ್ಯರು ಎಂ. ಶಿವಣ್ಣ ಸುತ್ತಮುತ್ತಲ ಗ್ರಾಪಂ ಸದಸ್ಯರು ತಾಲೂಕಿನ ಹಾಗೂ ಸುತ್ತಮುತ್ತಲ ಹಲವಾರು ನಾಯಕರು ಭಾಗವಹಿಸಿದ್ದರು
ತಾಲೂಕು ಕೇಂದ್ರಕ್ಕೆ ಒತ್ತಾಯ: ಪದವಿ ಕಾಲೇಜಿನ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಇಲ್ಲಿನ ನಾಡಕಚೇರಿಗೆ ಆಗಮಿಸಿ ಶಿಕಾರಿಪುರವನ್ನು ತಾಲೂಕ ಕೇಂದ್ರವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಶಿರಾಳಕೊಪ್ಪ ನಾಡಕಚೇರಿ ಎದುರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ತಾಲೂಕು ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ನಾಯಕ ರಾಜಣ್ಣ ಮಾತನಾಡಿ, ಯಡಿಯೂರಪ್ಪನವರು ಮುಖ್ಯಮಂತ್ರಿ ಆದಾಗ ತಾಲೂಕು ಘೋಷಣೆ ಮಾಡಲಿಲ್ಲವೇಕೆ ಎಂದು ಪ್ರಶ್ನಿಸಿ, ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದಿದ್ದರೆ ತಾಲೂಕು ಕೇಂದ್ರ ವಾಗುತ್ತಿತ್ತು. ಅದನ್ನು ಬಿಟ್ಟು ಈಗ ಹೋರಾಟ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸ್ಥಳಕ್ಕೆ ಆಗಮಿಸಿದ ಪಪಂ ಅಧ್ಯಕ್ಷರು ಹಾಗು ಪಕ್ಷದ ಮುಖಂಡರು ವಿದ್ಯಾರ್ಥಿಗಳಿಗೆ ತಾಲೂಕು ಅವಶ್ಯಕತೆ ಬಗ್ಗೆ ತಿಳಿಹೇಳಿದರು. ವಿದ್ಯಾರ್ಥಿಗಳು ತಾಲೂಕು ಕೇಂದ್ರ ಆಗಲೇಬೇಕು ಎಂದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.