ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ: ಪ್ರತಿಭಟನೆ

Lingaraj Badiger
Updated On : 13 Feb 2013, 10:42 am

ಶಿವಮೊಗ್ಗ: ಶಿಥಿಲಾವಸ್ಥೆಯಲ್ಲಿರುವ ನಗರದ ಸರ್ಕಾರಿ ಶಾಲೆಗಳ ದುರಸ್ತಿಗೆ ಅನುದಾನ ನೀಡುವ ಬದಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಿರುವುದನ್ನು ಖಂಡಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಮಂಗಳವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರಸಭೆ ಸಭಾಂಗಣದ ಒಳಗೆ ನುಗ್ಗಿದ ಕಾರ್ಯಕರ್ತರು ನಗರಸಭೆಯ ಪ್ರಸಕ್ತ ಸಾಲಿನ ಬಜೆಟ್ ಪೂರ್ವಭಾವಿ ಸಭೆಗೆ ಕೆಲಕಾಲ ತಡೆಯೊಡ್ಡಿದ್ದರು.  ನಗರದ ಖಾಸಗಿ ಶಿಕ್ಷಣ ಸಂಸ್ಥೆ ರವಿಶಂಕರ್ ವಿದ್ಯಾಮಂದಿರಕ್ಕೆ ನಗರಸಭೆ ರು. 20 ಲಕ್ಷ ಅನುದಾನ ನೀಡಿರುವುದು ಖಂಡನೀಯ. ಕೂಡಲೇ ನಗರಸಭೆ ಅಧಿಕಾರಿಗಳು ಈ ಹಣವನ್ನು ವಾಪಸ್ಸು ಪಡೆಯಬೇಕು. ಸಾರ್ವಜನಿಕರಿಂದ ಸಂಗ್ರಹಿಸಿದ್ದ ತೆರಿಗೆ ಹಣವನ್ನು ಖಾಸಗಿ ಸಂಸ್ಥೆಗಳಿಗೆ ಹಣ ಹಂಚುತ್ತಿರುವುದು ನಗರಸಭೆ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಹಣ ಬಿಡುಗಡೆ ಮಾಡಿಲ್ಲ: ಹಿಂದೆ ನಗರಸಭೆ ವಸೂಲಿ ಮಾಡುತ್ತಿದ್ದ ತೆರಿಗೆ ಹಣದಲ್ಲಿ ಶೈಕ್ಷಣಿಕ ಸೆಸ್ ಎಂದು ಶೇ.11ರಷ್ಟು ಮೀಸಲಿಡಬಕೀತ್ತು. ಅದನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೀಡಬೇಕಿತ್ತು. ಆದರೆ ಇದುವರೆಗೂ ಯಾವುದೇ ಅನುದಾನ  ಒದಗಿಸಿಲ್ಲ. ಈ ಹಿಂದೆಯೇ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕಾಂಪೌಂಡ್ ನಿರ್ಮಿಸಿಕೊಡಬೇಕೆಂದು ಮನವಿ ಸಲ್ಲಿಸಿದ್ದರೂ ಇದುವರೆಗೆ ಕಾಮಗಾರಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಗರಸಭೆ ಅಧ್ಯಕ್ಷರ ವಾರ್ಡ್‌ನಲ್ಲೇ ಇರುವ ಕೋರ್ಪಲಯ್ಯನ ಛತ್ರದ ಹಿಂಭಾಗದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಅದನ್ನು ಅಭಿವೃದ್ಧಿಗೊಳಿಸಲು ನಗರಸಭೆಯಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ನಗರಸಭೆ ಮೊದಲು ಸರ್ಕಾರಿ ಶಾಲೆಗಳ ಮೂಲಭೂತ ಅಗತ್ಯತೆಗಳನ್ನು  ಪೂರೈಸಲಿ. ನಂತರ ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಕಾಳಜಿ ವಹಿಸಲಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಚೇತನ್, ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮಧುಸೂದನ್,  ರಾಜ್ಯ ಕಾರ್ಯದರ್ಶಿ ಶಮಂತ್ ಶ್ರೀಜಿತ್, ವಿಕಾಸ್, ಭರತ್, ವಿನಯ್, ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement