ಆರೋಗ್ಯ ಗುಜರಿ: ತನಿಖೆಗೆ ಸಮಿತಿ
ಶಿವಮೊಗ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅನುಪಯುಕ್ತ ವಸ್ತುಗಳನ್ನು ರಾತ್ರೋರಾತ್ರಿ ಸಾಗಿಸಲು ಮುಂದಾದ ಕ್ರಮ ಜಿಲ್ಲಾ ಪಂಚಾಯ್ತಿಯ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಮತ್ತೆ ಪ್ರಸ್ತಾಪವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಸದನ ಸಮಿತಿ ರಚಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಸುಂದರೇಶ್, ಜೆಡಿಎಸ್‌ನ ಕೃಷ್ಣೇಗೌಡ, ಕುಮಾರ್, ಈ ವಸ್ತುಗಳು ಅನುಪಯುಕ್ತ ಎಂದು ವರದಿ ನೀಡಿದವರು ಯಾರು ಇವುಗಳನ್ನು ಹರಾಜು ಹಾಕಲು ನಿಮಗೆ ಅಧಿಕಾರವಿತ್ತೇ ಎಂದು ಜಿಲ್ಲ ಆರೋಗ್ಯಾಧಿಕಾರಿಯವರ ಮೇಲೆ ಹರಿಹಾಯ್ದರು.
ಇಲ್ಲಿ ದೊಡ್ಡ ಗೋಲ್‌ಮಾಲ್ ನಡೆದಿದ್ದು, ಸದನ ಸಮಿತಿ ರಚಿಸಬೇಕೆಂದು ಪಟ್ಟು ಹಿಡಿದರು. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನೀವು ಸಹ ಭಾಗಿ ಎಂದುಕೊಳ್ಳಬೇಕಾಗುತ್ತದೆ ಎಂದು ಜಿ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಮೇಲೆ ಒತ್ತಡ ಹಾಕಿದರು. ಕೊನೆಗೆ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಅವರು, ಇನ್ನೊಂದು ವಾರದಲ್ಲಿ ಸದನ ಸಮಿತಿ ರಚಿಸಿ ತನಿಖೆ ಆರಂಭಿಸುವುದಾಗಿ ರೂಲಿಂಗ್ ನೀಡಿದರು.
ಕಳಪೆ ಅಕ್ಕಿ: ಸಮಾಜ ಕಲ್ಯಾಣ ಇಲಾಖೆ ಹಾಗೂ ಬಿಸಿಎಂ ಹಾಸ್ಟೆಲ್‌ಗಳಿಗೆ ಸರಬರಾಜು ಮಾಡುತ್ತಿರುವ ಅಕ್ಕಿ ಕಳಪೆಯಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಸುಂದರೇಶ್ ವಿಷಯ ಪ್ರಸ್ತಾಪ ಮಾಡಿದ್ದಲ್ಲದೇ, ಕಳಪೆ ಅಕ್ಕಿಯನ್ನೂ ತೋರಿಸಿದರು.
ಹುಳುಗಳಿಂದ ಕೂಡಿದ್ದ ಅಕ್ಕಿ ಹಾಗೂ ಗೋಧಿಯನ್ನು ನೋಡಿದ ಅಧ್ಯಕ್ಷೆ-ಉಪಾಧ್ಯಕ್ಷರು ಅಧಿಕಾರಿಗಳಿಂದ ಸಮಜಾಯಿಷಿ ಕೇಳಿದರು. ನಾವು ಗುಣಮಟ್ಟವನ್ನು ಪರಿಶೀಲಿಸಿಯೇ ಅಕ್ಕಿಯನ್ನು ಹಾಸ್ಟೆಲ್‌ಗಳಿಗೆ ಸರಬರಾಜು ಮಾಡಿದ್ದೇವೆ ಎಂದಾಗ ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ಎದ್ದುನಿಂತು, ನಾವೇ ನೋಡಿದ್ದೇವೆ. ಕಳಪೆಯಾಗಿದೆ ಎಂದರು.
ಅಲ್ಲದೇ ಶಿವಮೊಗ್ಗದ ಬಿಸಿಎಂ ಬಾಲಕಿಯರ ಹಾಸ್ಟೆಲ್‌ನ ಬಾತ್‌ರೂಂ ಗೋಡೆಯಲ್ಲಿ ತೂತಾಗಿ ಹುಡುಗರು ಇಣುಕಿ ನೋಡುತ್ತಿರುವ ಬಗ್ಗೆ ಅವರ ಗಮನ ಸೆಳೆದು ರಿಪೇರಿ ಮಾಡಿಸಲು ಸೂಚಿಸಿದರೂ ಕ್ರಮ ಕೈಗೊಳ್ಳಲಿಲ್ಲ . ಕೊನೆಗೆ ನಾವೇ ಮಾಡಿದೆವು ಎಂದು ಹೊಸ ವಿಷಯ ಪ್ರಸ್ತಾಪಿಸಿದರು.
ಸಿಇಓ ಶಶಿಕಾಂತ್ ಸೆಂಥಿಲ್, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿ ಚರ್ಚೆಗೆ ಮುಕ್ತಾಯ ಹಾಡಿದರು.
ಇದೇ ಸಂದರ್ಭದಲ್ಲಿ ಸುಂದರೇಶ್ ಅವರು ತೀರ್ಥಹಳ್ಳಿಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸಿಬ್ಬಂದಿ ವಿದ್ಯಾರ್ಥಿಗಳ ಖಾತೆ ತೆರೆಯಲು ನಿರಾಸಕ್ತಿ ತೋರುತ್ತಿದ್ದಾರೆ. ಮಕ್ಕಳಿಗೆ ಸೌಲಭ್ಯ ಸಿಗುತ್ತಿಲ್ಲ ಎಂದು ದೂರಿದರು. ಈ ಬಗ್ಗೆ ಆರ್‌ಬಿಐ ಒಂಬುಡ್ಸ್‌ಮನ್ ಅವರಿಗೆ ದೂರು ನೀಡುವುದಾಗಿ ಸಿಇಓ ಹೇಳಿದರು.
ಇಂಡೀಕರಣ: ಜಿಲ್ಲೆಯಾದ್ಯಂತ ಇಂಡೀಕರಣ ಮಾಡುತ್ತಿರುವ ಬಗ್ಗೆ ಕಲಗೋಡು ರತ್ನಾಕರ್ ಅವರು ಪ್ರಸ್ತಾಪಿಸಿ, ಇದನ್ನು ಕೈಬಿಡುವಂತೆ ನಿರ್ಣಯಿಸಲು ಒತ್ತಾಯಿಸಿದರು. ಅಧ್ಯಕ್ಷರು ಅದಕ್ಕೊಪ್ಪಿ, ಯಾರನ್ನೂ ಎತ್ತಂಗಡಿ ಮಾಡದಂತೆ ನಿರ್ಣಯಿಸಲು ಸೂಚಿಸಿದರು.
ಹಾಸ್ಟೆಲ್‌ಗಳ ರಿಪೇರಿಗೆ ನಿಗದಿಯಾಗಿರುವ 50 ಲಕ್ಷಗಳನ್ನು 5 ಹಾಸ್ಟೆಲ್‌ಗಳಿಗೆ ನೀಡಿರುವ ಬಗ್ಗೆಯೂ ಸದಸ್ಯರು ಆಕ್ಷೇಪಿಸಿ, ಎಲ್ಲಾ ತಾಲೂಕುಗಳಿಗೂ ಸಮಾನವಾಗಿ ಹಂಚಿಕೆ ಮಾಡಿಸುವಲ್ಲಿ ಯಶಸ್ವಿಯಾದರು.
ಜಿಲ್ಲೆಯ ಪಶುವೈದ್ಯ ಆಸ್ಪತ್ರೆಗಳ ರಿಪೇರಿಗೆಂದು ಮೀಸಲಿಟ್ಟಿದ್ದ 10 ಲಕ್ಷ ವನ್ನು ಶಿವಮೊಗ್ಗದ ಇಲಾಖೆ ಉಪನಿರ್ದೇಶಕರ ಕಚೇರಿ ಮೂಲ ಸೌಕರ್ಯಕ್ಕಾಗಿ ಬಳಸುವುದಕ್ಕೆ ಕಲಗೋಡು ರತ್ನಾಕರ್ ಆಕ್ಷೇಪಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.