ತಮಿಳು ಕ್ಯಾಲೆಂಡರ್ ಪ್ರಕಟಿಸಿದ ಉಪಮುಖ್ಯ ಮಂತ್ರಿ ಈಶ್ವರಪ್ಪ
ಶಿವಮೊಗ್ಗ: ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ತಮಿಳ್ ಪ್ರೇಮಕ್ಕೆ ಕೈಗನ್ನಡಿಯಾಗಿ ಒಂದು ದಾಖಲೆ ಹೊರಬಿದ್ದಿದೆ.
ಶಿವಮೊಗ್ಗ ನಗರದ ಓಂ ಶಕ್ತಿ ದೇವಾಲಯ ಸಂಸ್ಥೆ ಪ್ರಕಟಿಸಿರುವ ವಾರ್ಷಿಕ ಕ್ಯಾಲೆಂಡರ್ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಕೆ.ಎಸ್. ಈಶ್ವರಪ್ಪನವರ ಹುದ್ದೆ ವಿವರ ಸಹಿತ ಭಾವಚಿತ್ರ ಪ್ರಕಟಗೊಂಡಿದೆ. ವಿಶೇಷವೆಂದರೆ ಇಡೀ ಕ್ಯಾಲೆಂಡರ್ನಲ್ಲಿ ಶಿರ್ಷಿಕೆ ಸಾಲು ಮತ್ತು ಈಶ್ವರಪ್ಪ ಹಾಗೂ ಅವರ ಪುತ್ರನ ಹೆಸರು ಹೊರತಾಗಿ ಉಳಿದೆಲ್ಲಾ ತಮಿಳುಮಯವಾಗಿದೆ. ಒಂದು ಕನ್ನಡ ಸಾಲಿನಲ್ಲೂ ದೋಷ ಕಂಡುಬಂದಿದೆ. ದೇವಾಲಯ ಬದಲಾಗಿ ದೇವಾಯಲ ಎಂದು ಬಳಸಲಾಗಿದೆ.
ಈ ಮಧ್ಯೆ, ಇಲ್ಲಿನ ಕನ್ನಡ ಸೈನ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರೊಂದನ್ನು ಸಲ್ಲಿಸಿದೆ. ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ತಮಿಳು ಅಕ್ಷರಗಳಲ್ಲಿ ತಮ್ಮ ಭಾವಚಿತ್ರದೊಂದಿಗೆ ದಿನದರ್ಶಿಕೆ ಮುದ್ರಿಸಿ ಕನ್ನಡಿಗರ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳಬೇಕೆಂಬುದು ಸಂಘಟನೆ ಪ್ರಧಾನ ಕಾರ್ಯದರ್ಶಿ ಪಿ.ಸಿ. ಜಯ ಅವರ ಒತ್ತಾಯ.
ಸಂಘಟನೆ ಯಾವುದೇ ರೀತಿಯಲ್ಲಿ ದೇವರನ್ನು ಅಥವಾ ಒಂದು ಸಮಾಜವನ್ನು ಅವಮಾನಿಸುತ್ತಿಲ್ಲ. ಅದೇ ರೀತಿ ಕೆ.ಎಸ್. ಈಶ್ವರಪ್ಪನವರೂ ತಮ್ಮ ಹೆಸರು ಹಾಕಿಕೊಂಡಿದ್ದಕ್ಕೂ ಅಭ್ಯಂತರವಿಲ್ಲ. ಬದಲಾಗಿ, ಉಪಮುಖ್ಯಮಂತ್ರಿ, ಕರ್ನಾಟಕ ಸರ್ಕಾರ ಎಂಬ ಪದನಾಮ ಬಳಸಿಕೊಂಡಿದ್ದಾರೆ. ಈ ಕ್ರಮ ಸರಿಯಲ್ಲ ಎಂಬುದು ಜಯ ಅವರ ವಾದ.
ಉಪಮುಖ್ಯಮಂತ್ರಿ, ಕರ್ನಾಟಕ ಸರ್ಕಾರ ಎಂದು ಬಳಸಿರುವ ಈ ಕ್ಯಾಲೆಂಡರ್ ಸಂಪೂರ್ಣ ತಮಿಳುಮಯವಾಗಿದೆ. ಇದು ನಾಚಿಕೆಗೇಡಿನ ಸಂಗತಿ. ಒಂದು ಕಡೆ ತಮಿಳುನಾಡು ಸರ್ಕಾರ ಕನ್ನಡ ಶಾಲೆಯಲ್ಲಿ ಮುಚ್ಚುತ್ತಿದೆ. ತಮಿಳುನಾಡಿನಲ್ಲಿ ಕನ್ನಡಿಗರನ್ನು ಪದೇ ಪದೇ ಅವಮಾನಿಸುವ ಸಂಗತಿ ನಡೆದಿದೆ. ಕಾವೇರಿ ನೀರಿನ ವಿಚಾರದಲ್ಲೂ ತಮಿಳುನಾಡು ಸರ್ಕಾರ ತೊಂದರೆ ನೀಡುತ್ತಿರುವ ಈಶ್ವರಪ್ಪನವರಿಗೆ ಗೊತ್ತಿಲ್ಲವೇ ಎಂದು ಕನ್ನಡ ಸೈನ್ಯ ಪ್ರಶ್ನಿಸಿದೆ.
ಈಶ್ವರಪ್ಪ ಹಾಗೂ ಅವರ ಕುಟುಂಬಕ್ಕೆ ಸೇರಿದ ಶುಭಮಂಗಳ ಟ್ರಸ್ಟ್ ಕನ್ನಡಿಗರ ಭಾಷಾ ಸಾಮರಸ್ಯವನ್ನು ಕದಡುತ್ತಿರುವ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮಕೈಗೊಳ್ಳಬೇಕೆಂಬುದು ಕನ್ನಡ ಸೈನ್ಯದ ಒತ್ತಾಯ. ಅಷ್ಟೇ ಅಲ್ಲದೇ, ಈ ದಿನದರ್ಶಿಕೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರನ್ನು ಪಿ.ಸಿ. ಜಯ ಒತ್ತಾಯಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.