ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
ಶಿವಮೊಗ್ಗ: ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಜನಸ್ಪಂದನ ವೇದಿಕೆ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಘೋಷಣೆ: ನಗರದ ಮಹಾವೀರ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಕೆಲ ಕಾಲ ಸಂಚಾರ ವ್ಯವಸ್ಥೆಗೆ ತಡೆಯೊಡ್ಡಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದ್ದು, ಇದ್ದರಿಂದ ಜನ ಕಂಗಾಲಾಗಿದ್ದಾರೆ. ಕೂಡಲೇ ಅಕ್ರಮ ದಾಸ್ತಾನುಗಳ ಮೇಲೆ ದಾಳಿ ನಡೆಸಿ ಕಾಳ ಸಂತೆಕೋರರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ಅಂತರ ರಾಜ್ಯಗಡಿಯಲ್ಲಿ ರಾಜ್ಯದ ಅಕ್ಕಿ ದಾಸ್ತಾನು ಹೊರ ರಾಜ್ಯಕ್ಕೆ ಹೋಗದಂತೆ ಚೆಕ್ ಪೋಸ್ಟ್ಗಳನ್ನು ತೆರೆಯಬೇಕು ಮತ್ತು ಅಕ್ಕಿಯ ಸಾಗಾಣಿಕೆಯನ್ನು ನಿರ್ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹಾಲಿನ ಬೆಲೆ: ಹಾಲು ಒಕ್ಕೂಟಗಳು, ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀ. ಹಾಲಿಗೆ ನಿಗದಿತ ಮೌಲ್ಯಕ್ಕಿಂತ ಕಡಿಮೆ ನೀಡಿ ವಂಚನೆ ಮಾಡುತ್ತಿವೆ. ಏ.2012ರ ಹಿಂದೆ ಪ್ರತಿ ಲೀಟರ್ ಹಾಲಿಗೆ 20.80 ರುಪಾಯಿ ನೀಡುತ್ತಿತ್ತು. ಈ ಸಂದರ್ಭದಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ಬೆಲೆಯನ್ನು 24 ರಿಂದ 32 ರುಪಾಯಿವರೆಗೆ ಏರಿಕೆ ಮಾಡಿತು. ಆದರೆ, 2012ರ ಏಪ್ರಿಲ್ ನಂತರ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 16.60 ರುಪಾಯಿ ನೀಡುತ್ತಿದೆ. ಇದರಿಂದ ಹಾಲು ಉತ್ಪಾದಕರಿಗೆ ಅನ್ಯಾಯವಾಗಿದೆ. ಕೂಡಲೇ ಹಾಲು ಉತ್ಪಾದಕರಿಗೆ ಸೂಕ್ತ ದರ ನೀಡಬೇಕು. ಕೆಎಂಎಫ್ ಅವ್ಯವಹಾರವನ್ನು ಕೂಡಲೇ ಸಿಓಡಿ ತನಿಖೆಗೆ ಒಳಪಡಿಸಬೇಕು ಎಂದರು.
ಸೊರಬ ತಾಲೂಕಿನ ದಂಡಾವತಿ ಯೋಜನೆ ಕೈಬಿಡಬೇಕು. ಇದೇ ತಾಲೂಕಿನ 1,160 ಕೆರೆಗಳ ಪುನರರ್ನಿರ್ಮಾಣಕಾರ್ಯಕ್ಕೆ ಮುಂದಾಗಬೇಕು. ನಕಲಿ ಪಡಿತರ ಚೀಟಿ ರದ್ದುಗೊಳಿಸಬೇಕು. ರೈತರ ಸಾಲದ ಬಡ್ಡಿ ಹಣ ವಾಪಸು
ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಬಿ.ಆರ್. ಮನೋಹರ ಗೌಡ, ಸೈಯದ್ ಮಜರ್, ಪ್ರಧಾನ ಕಾರ್ಯದರ್ಶಿ ಜಗದೀಶ್, ಉಪಾಧ್ಯಕ್ಷ ಎನ್. ಮಂಜುನಾಥ್, ಮಹೇಶ್, ಎನ್. ಮಂಜುನಾಥ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.