ಗಸ್ತು ಕರ್ತವ್ಯಕ್ಕೆ 37 ಚೀತಾ ಬಿಡುಗಡೆ
ಶಿವಮೊಗ್ಗ: ಪೊಲೀಸ್ ಇಲಾಖೆಯು ಜಿಲ್ಲೆಯಲ್ಲಿ ಮೋಟಾರು ಸೈಕಲ್ ಮೊಬೈಲ್ ಗಸ್ತು ಕರ್ತವ್ಯಕ್ಕೆ ಚಿರತೆಯ ಬಣ್ಣವನ್ನೇ ಹೋಲುವ ಚೀತಾ ಹೆಸರಿನ 37 ಮೋಟಾರ್ ಬೈಕ್‌ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಇವುಗಳಲ್ಲಿ ಶಿವಮೊಗ್ಗಕ್ಕೆ 14, ಭದ್ರಾವತಿಗೆ 8, ತೀರ್ಥಹಳ್ಳಿಗೆ 6, ಸಾಗರಕ್ಕೆ 3 ಹಾಗೂ ಶಿಕಾರಿಪುರಕ್ಕೆ 6 ವಾಹನಗಳನ್ನು ವಿತರಿಸಲಾಗಿದೆ. ಈ ವಾಹನಗಳಿಗೆ ನಿಗದಿತವಾದ ಗಸ್ತುಗಳನ್ನು ನೀಡಲಾಗಿದ್ದು, ಪ್ರತ್ಯೇಕವಾದ ಸಂಖ್ಯೆಗಳನ್ನು ನೀಡಲಾಗಿದೆ.
ಸರಗಳ್ಳತನ, ಪಿಕ್ ಪಾಕೆಟ್, ಅಪಹರಣ, ದೊಂಬಿ, ಹೆಣ್ಣುಮಕ್ಕಳಿಗೆ ಕಿರುಕುಳ, ಇತ್ಯಾದಿ ಘಟನೆಗಳು ಸಂಭವಿಸಿದಾಗ ಚೀತಾ ವಾಹನಗಳು ತುರ್ತಾಗಿ ಸ್ಥಳಕ್ಕೆ ಧಾವಿಸಿ, ಸಂಭವಿಸಬಹುದಾದ ಅಹಿತಕರ ಘಟನೆಗಳನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿವೆ.
ಈ ವಾಹನಗಳಿಗೆ 2 ಸಿಬ್ಬಂದಿ ನಿಯೋಜಿಸಲಾಗಿದ್ದು, ಇವರು ದಿನದ 24ಗಂಟೆಯೂ ಸೇವೆ ನೀಡಲಿದ್ದಾರೆ. ಚೀತಾ ಸೇವೆಯ ಅವಶ್ಯಕತೆ ಇದ್ದಲ್ಲಿ ಸಾರ್ವಜನಿಕರು ಪೊಲೀಸ್ ಕಂಟ್ರೋಲ್ ರೂಮ್ ಅಥವಾ ದೂರವಾಣಿ ಸಂಖ್ಯೆ 100ಕ್ಕೆ ಕರೆಮಾಡಿ ಸಹಾಯ ಪಡೆಯಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ಕೋರಲಾಗಿದೆ.