ಜ್ಞಾನವೃದ್ಧಿಗೆ ಮಾತೃಭಾಷೆ ಬಳಸಿ: ಚಿದಂಬರ್
ಸೊರಬ: ನಮ್ಮ ಬದುಕಿಗೋಸ್ಕರ ಮಾತ್ರ ಅನ್ಯ ಭಾಷೆಯನ್ನು ಬಳಸಿ, ನಾವು ಅಪ್ಪಿ, ಒಪ್ಪಿದ ಮಾತೃ ಭಾಷೆಯನ್ನು ಜ್ಞಾನ ವಿಕಾಸದ ವೃದ್ಧಿ ಹಾಗೂ ನಾಡು, ನುಡಿಯ ಗೌರವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬಳಸಬೇಕು ಎಂದು ಪಟ್ಟಣ ಸಪಪೂ ಕಾಲೇಜು ಪ್ರಾಚಾರ್ಯ ಕೆ. ಚಿದಂಬರ್ ತಿಳಿಸಿದರು.
ಇಲ್ಲಿನ ಸಪಪೂ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಪಪೂ ಕಾಲೇಜು ವತಿಯಿಂದ ಗುರುವಾರ ನಡೆದ ದತ್ತಿ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.
ಸಾರ್ವಕಾಲಿಕ ಸತ್ಯ: ಎಂ. ಮಹದೇವಪ್ಪ ಗುತ್ತಿಗೆದಾರರು ಇವರ ದತ್ತಿನಿಧಿ ಉಪನ್ಯಾಸವಾದ ಕುವೆಂಪು ಸಾಹಿತ್ಯ ವಿಚಾರ ಕುರಿತಂತೆ ಶಿಕ್ಷಕ ಸಾ.ಕೆ. ಸುರೇಶ್ ಮಾತನಾಡಿ, ಈ ಮಣ್ಣಿನ ಸಕಲವನ್ನೂ ಹೀರಿಕೊಂಡು ಬೆಳೆದ ಕುವೆಂಪು ಅವರ ಸಾಹಿತ್ಯ ಸಾರ್ವಕಾಲಿಕ ಸತ್ಯ ಹಾಗೂ ಸತ್ವಭರಿತ ಎಂದರು.
ಚಿಕ್ಕಾವಲಿ ನಾಗರಾಜ ಗೌಡ ಅವರ ದತ್ತಿನಿಧಿ ಉಪನ್ಯಾಸ ಕೃಷಿ ಸಾಹಿತ್ಯದಲ್ಲಿ ಸಾವಯವ ಕೃಷಿ ಕುರಿತು ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಉಪನ್ಯಾಸ ನೀಡಿ, ಪ್ರಗತಿಯ ಭ್ರಮೆಯಲ್ಲಿ ರತ್ನಗರ್ಭ ವಸುಂಧರೆಯ ಒಡಲನ್ನು ಬರಿದು ಮಾಡುತ್ತಿರುವ ನಾವು ಸಹಜವಾದುದನ್ನು ಬಿಟ್ಟು, ಅಸಹಜತೆಯೆಡೆಗೆ ವಾಲುತ್ತಿರುವ ಪರಿಣಾಮವಾಗಿ ನಮಗಿಂದು ಕುಡಿಯಲು ಶುದ್ಧ ನೀರು ಸಹ ದೊರಕಲಾರದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಎಸ್. ಕೃಷ್ಣಾನಂದ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಉಪ ಪ್ರಾಂಶುಪಾಲ ಬಸವರಾಜ ಜಡಳ್ಳಿ, ಉಪನ್ಯಾಸಕ ರವೀಂದ್ರ ಭಟ್ ಕುಳಿವೀಡು, ರಾಘವೇಂದ್ರ ಬೀಳಗಿ, ಸಂಯೋಜಕ ಮಂಜಪ್ಪ, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸೌಜನ್ಯ ಪ್ರಾರ್ಥಿಸಿ, ಭೀಮಪ್ಪ ನಿರೂಪಿಸಿದರು. ವಿರೂಪಾಕ್ಷಪ್ಪ ಸ್ವಾಗತಿಸಿದರು. ಹಾಲೇಶ್ ನವುಲೆ ವಂದಿಸಿದರು. ಉಪನ್ಯಾಸಕ ಯಾಜಿ ಅವರು ಕುವೆಂಪು ಗೀತೆಗಳ ಗಾಯನ ನಡೆಸಿದರು.