ಪಕ್ಷಗಳ ಪ್ರಚಾರ ಜೋರು: ಮತದಾರರಿಗೆ ಭರಪೂರ ಆಶ್ವಾಸನೆ
ಸೊರಬ: ರಾಜ್ಯ ವಿಧಾನಸಭೆ ಚುನಾವಣೆಯ ಅಧಿಕೃತ ಘೋಷಣೆ ಆಗದಿದ್ದರೂ ಜೆಡಿಎಸ್, ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಆರಂಭಗೊಂಡಿದ್ದು, ತಾಲೂಕಿನ ಪ್ರತಿ ಗ್ರಾಮಗಳಿಗೆ ತೆರಳಿ ಮತಯಾಚಿಸುವ ಪರಿ ಆರಂಭಗೊಂಡಿದೆ.
ಗ್ರಾಮ ಸಂಪರ್ಕ ಸಭೆ ಹೆಸರಲ್ಲಿ ಸಂಪೂರ್ಣ ಪ್ರಚಾರ ಕಾರ್ಯ ನಡೆಯುತ್ತಿದೆ. ಆರೋಪ ಪ್ರತ್ಯಾರೋಪಗಳೆ ಪ್ರಧಾನವಾಗಿರುವ ಸಭೆಗಳಲ್ಲಿ ವಿಶ್ವಾಸಿ, ಅಭಿಮಾನಿಗಳ ಬಾಡೂಟ, ಔತಣಕೂಟವೂ ಗಮನಾರ್ಹವಾಗಿದೆ. ಜೆಡಿಎಸ್ ನಿಂದ ರಾಜ್ಯ ಯುವ ಘಟಕದ ಅಧ್ಯಕ್ಷ ಮಧುಬಂಗಾರಪ್ಪ ಭಾರಿ ಪ್ರಚಾರ ಸಭೆ ನಡೆಸುತ್ತಿದ್ದು, ರಾಜ್ಯ ಮತ್ತು ಕೇಂದ್ರ ಆಡಳಿತ ಸರ್ಕಾರದ ವಿರುದ್ಧ ಪ್ರಬಲ ವಾಗ್ದಾಳಿ ನಡೆಸಲಾರಂಭಿಸಿದ್ದಾರೆ.
ಭರವಸೆಗಳ ಮಹಾಪೂರ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಬಗರ್ ಹುಕುಂ ಸಕ್ರಮಾತಿ, ಕೃಷಿ ಸಾಲಮನ್ನ, ಕಡಿಮೆ ದರಕ್ಕೆ ಗೊಬ್ಬರ, ಗರ್ಭಿಣಿ ಸ್ತ್ರೀಯರಿಗೆ ಹೆರಿಗೆಯ ತನಕವೂ ತಿಂಗಳಿಗೆ 5 ಸಾವಿರ, ಹಿರಿಯರಿಗೆ, ಅಂಗವಿಕಲರಿಗೆ ಮಾಸಿಕ 2500 ವೇತನ, ಮುಂತಾದ ಭರವಸೆ, ಆಶ್ವಾಸನೆ ನೀಡಲಾಗುತ್ತಿದೆ.
ಅಧಿಕಾರ ನೀಡಿ: ಜನತೆಯ ವಿಶ್ವಾಸ ಮುಖ್ಯ ಎಂದಿರುವ ಮಧು ಬಂಗಾರಪ್ಪ ಸೋಲು ಗೆಲವು ಮುಖ್ಯವಲ್ಲ, ಸದಾ ನಿಮ್ಮೆಲ್ಲರ ಸಂಪರ್ಕದಲ್ಲಿ ನಾನು ಇರಲು ಬಯಸುತ್ತೇನೆ, ಆದರೆ, ನಿಮ್ಮ ಸಂಪೂರ್ಣ ಬೆಂಬಲಕ್ಕೆ ನಾವು ನಿಲ್ಲಬೇಕಿದ್ದರೆ ಅಧಿಕಾರ ಅನಿವಾರ್ಯ.
ಹಾಗಾಗಿ ತಂದೆಯವರ ಕೊನೆಯ ಆಸೆಯನ್ನು ನೀವು ಈಡೇರುಸುತ್ತೀರಿ ಎಂಬ ಪೂರ್ಣ ವಿಶ್ವಾಸ ಇರಿಸುತ್ತೇನೆ.
ದಂಡಾವತಿ ಯೋಜನೆಯಾಗಲಿ, ಬ್ಯಾತನಾಳ್ ಯೋಜನೆಗಾಗಲಿ ಎಂದಿಗೂ ನಮ್ಮ ಸಮ್ಮತಿ ಇಲ್ಲ, ಕೃಷಿಕರ ಪರವಾಗಿ ಹಲವಾರು ವಿಧದ ನೀರಾವರಿ ಕನಸನ್ನುಳ್ಳ ಹೆಚ್.ಡಿ. ಕುಮಾರಸ್ವಾಮಿಯವರ ಕೈ ಬಲಪಡಿಸಲು ಒಮ್ಮೆ ನನ್ನನ್ನು ಆರಿಸಿ ಎಂದು ಕೋರಿದ್ದಾರೆ.
ಪಕ್ಷದ ಬ್ಲಾಕ್ ಅಧ್ಯಕ್ಷ ಹೆಚ್. ಗಣಪತಿ, ಶೇಖರಮ್ಮ, ಕೆ.ಪಿ. ರುದ್ರಗೌಡ, ಎಂ.ಡಿ. ಶೇಖರ್, ತಾಪಂ ಸದಸ್ಯ ವೀರಭದ್ರಗೌಡ, ಜಿಲ್ಲಾ ಉಪಾಧ್ಯಕ್ಷ ಎನ್. ಕುಮಾರ್, ಕೆ.ವಿ. ಗೌಡ, ಸಂಜೀವ್, ಪಿ.ಎಸ್. ಮಂಜುನಾಥ್, ಜೆ. ಚಂದ್ರಶೇಖರ್, ಕಾರ್ಯಕರ್ತರು ಮೊದಲಾದವರು ಪಾಲ್ಗೊಳ್ಳುತ್ತಿದ್ದಾರೆ.