ಬಿಎಸ್ವೈ ಕೊಡುಗೆ ಅಪಾರ
ಶಿಕಾರಿಪುರ: ಕ್ಷೇತ್ರದ ಶಾಸಕರಾಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚಿನ ಶಾಲಾ ಕಾಲೇಜುಗಳನ್ನು ತಾಲೂಕಿಗೆ ಮಂಜೂರುಗೊಳಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಎಲ್ಲಾ ರೀತಿಯಲ್ಲಿ ಅವಕಾಶ ಕಲ್ಪಿಸಿದ್ದಾರೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಗುರುವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ನಡೆದ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜುಗಳ 2012-13 ನೇ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡೆ ಹಾಗೂ ಎನ್ನೆಸ್ಸೆಸ್ ಘಟಕಗಳ ಸಮಾರೋಪ ಹಾಗೂ ದಿ. ಮೈತ್ರಾದೇವಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೀವಿಕಾ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹತ್ವದ ಘಟ್ಟ: ಪ್ರತಿಯೊಬ್ಬರ ಬದುಕಿನಲ್ಲಿ ವಿದ್ಯಾರ್ಥಿ ಜೀವನ ಬಹು ಮಹತ್ವದ ಘಟ್ಟವಾಗಿದ್ದು, ಈ ಸಂದರ್ಭವನ್ನು ಸಮರ್ಪಕವಾಗಿ ಬಳಸಿಕೊಂಡು ಉನ್ನತ ಶಿಕ್ಷಣ ಪಡೆಯದೇ ನಿರ್ಲಕ್ಷ್ಯ ವಹಿಸಿದಲ್ಲಿ, ಭವಿಷ್ಯದಲ್ಲಿ ಪಶ್ಚಾತ್ತಾಪ ಪಡಬೇಕಾಗಲಿದೆ ಎಂದು ಎಚ್ಚರಿಸಿದರು.
ಪ್ರಾಚಾರ್ಯ ವಿರೂಪಾಕ್ಷಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣದ ನೂತನ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಬೋಧನೆಗೆ ಅನಿವಾರ್ಯವಾದ ಉಪಕರಣ, ಪೀಠೋಪಕರಣಗಳ ಸಮಸ್ಯೆ ಕಾಡುತ್ತಿದ್ದು, ಶೀಘ್ರ ಮಂಜೂರಿಗೆ ಮನವಿ ಮಾಡಿದರು.
ಸಂಸದ ರಾಘವೇಂದ್ರರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದಿ. ಮೈತ್ರಾದೇವಿ ಸ್ಮರಣಾರ್ಥ ನಗದು ಬಹುಮಾನವನ್ನು ವಿತರಿಸಿದರು.
ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷ ಅಮ್ಜದ್ ಹುಸೇನ್, ತಾಪಂ ಅಧ್ಯಕ್ಷ ಹನುಮಂತಪ್ಪ, ವಿ.ಕೆ. ನಾಗರಾಜ್, ನಿವೃತ್ತ ಪ್ರಾಚಾರ್ಯ ಬಿ.ಎಸ್. ಪಾಟೀಲ್, ಉಪಾಧ್ಯಕ್ಷ ನಾಗರಾಜ್, ಹಾಲಪ್ಪ, ಪ್ರಾಚಾರ್ಯ ನಾಗರಾಜಪ್ಪ,ಪ್ರಕಾಶ್ ಬಾಬು, ಲೀಲಾವತಿ, ಸುರೇಶ್ ಧಾರವಾಡದ, ಸಕಲೇಶ್ ಹುಲ್ಮಾರ್ ಮೊದಲಾದವರು ಉಪಸ್ಥಿತರಿದ್ದರು.