ಮುಂದುವರಿದ ಮರಳು ಸಮಸ್ಯೆ: ರಾಜಶೇಖರ
ಶಿವಮೊಗ್ಗ: ಹೊಸ ಮರಳು ಲೋಡಿಂಗ್ ಪಾಯಿಂಟ್ಗಳನ್ನು ಗುರುತಿಸಲು ಮರಳು ಲಾರಿ ಮಾಲೀಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಫೆಬ್ರವರಿ 18ರೊಳಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ಲಾರಿ ಮಾಲೀಕರ ಪರಿವಾರ, ಕುಟುಂಬದವರು ಸೇರಿ ರಸ್ತೆಗಿಳಿದು ಹೋರಾಡಲು ನಿರ್ಧರಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಮೊಗ್ಗ ಕಟ್ಟಡ ಸಾಮಾಗ್ರಿ ಸರಬರಾಜು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಡಿ. ರಾಜಶೇಖರ ಮಾತನಾಡಿ, ಸದ್ಯ ಮರಳು ತುಂಬಲು ಅವಕಾಶ ನೀಡಿರುವ ತೀರ್ಥಹಳ್ಳಿ ತಾಲೂಕಿನ ದಬ್ಬಣಗದ್ದೆ, ಮಹಿಷಿ, ಬಾಳಗಾರು, ಹುಣಸವಳ್ಳಿಗಳಲ್ಲಿ ಗುಣಮಟ್ಟದ ಮರಳು ಖಾಲಿಯಾಗಿದೆ. ಕೂಡಲೇ ಬೇರೆ ಸ್ಥಳದಲ್ಲಿ ಮರಳು ಭರ್ತಿ ಮಾಡಲು ಜಿಲ್ಲಾಡಳಿತ ಅವಕಾಶ ನೀಡಬೇಕು ಎಂಬುದು ನಮ್ಮ ಆಗ್ರಹ ಎಂದರು.
ಯೋಗ್ಯ ಮರಳು ಖಾಲಿ: ಮರಳು ಸಮಸ್ಯೆ ಪರಿಹಾರ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಈ ಕುರಿತಂತೆ ಬುಧವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ. ತೀರ್ಥಹಳ್ಳಿ ತಾಲೂಕಿನ ನಾಲ್ಕು ಲೋಡಿಂಗ್ ಪಾಯಿಂಟ್ ಸ್ಥಳಗಳಲ್ಲಿ ಗುಣಮಟ್ಟದ, ಕಟ್ಟಡ ನಿರ್ಮಾಣಕ್ಕೆ ಯೋಗ್ಯವಾದ ಮರಳು ಖಾಲಿಯಾಗಿದೆ. ಕಸ, ಕಡ್ಡಿ, ಕಲ್ಲು ಮಿಶ್ರಿತ ಮರಳು ದೊರಕುತ್ತಿದೆ. ಇದು ಕಟ್ಟಡ ನಿರ್ಮಾಣದ ಗಿಲಾವ್, ಆರ್ಸಿಸಿ ಮತ್ತಿತರ ಕಾರ್ಯಗಳಿಗೆ ಯೋಗ್ಯವಾಗಿಲ್ಲ. ಕಲ್ಲು ಮಿಶ್ರಿತ ಮರಳು ಪಡೆಯಲು ನಾಗರಿಕರು ನಿರಾಕರಿಸುತ್ತಿದ್ದಾರೆ ಎಂದು ತಿಳಿಸಿದರು.
ತೀರ್ಥಹಳ್ಳಿ ತಾಲೂಕಿನಲ್ಲಿ ಈಗಾಗಲೇ ಗುರುತಿಸಿರುವ ಹಲವು ಸ್ಥಳಗಳಲ್ಲಿ ಉತ್ತಮ ಮರಳು ಲಭ್ಯವಿದೆ. ಈ ಪ್ರದೇಶಗಳಲ್ಲಿ ಮರಳು ತುಂಬಲು ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ಕಳೆದ ಒಂದು ತಿಂಗಳಿನಿಂದ ಸಂಘದ ವತಿಯಿಂದ ಒತ್ತಾಯಿಸಿ, ಮನವಿ ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ನಮ್ಮ ಬೇಡಿಕೆಯ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ ಎಂದು ದೂರಿದರು.
ಜಿಲ್ಲಾಡಳಿತದ ವೈಫಲ್ಯದ ಹಿನ್ನೆಲೆಯಲ್ಲಿ ಪ್ರಸ್ತುತ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸಲಾಗುತ್ತಿದೆ. ಸಮಸ್ಯೆ ಪರಿಹಾರವಾಗುವವರೆಗೂ ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ ಎಂದ ಅವರು, ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲಕ್ಕೆ ಜಿಲ್ಲಾಡಳಿತವೇ ಸಂಪೂರ್ಣ ಹೊಣೆಯಾಗಿದೆ ಎಂದು ತಿಳಿಸಿದರು.
ಹಾಲಿ ಮರಳು ತುಂಬುವ ಸ್ಥಳಗಳಲ್ಲಿ ಮರಳು ಮಾಫಿಯಾ ತಂಡ ವಿನಾಕಾರಣ ಲಾರಿಗಳ ಚಾಲಕರು, ಕೂಲಿ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಮರಳು ಸಾಗಾಣಿಕೆಗೆ ಅಡ್ಡಿಪಡಿಸುತ್ತಿದೆ. ಈ ಮಾಫಿಯಾದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳು: ಉತ್ತಮ ಮರಳು ಲಭ್ಯವಿರುವ ಸ್ಥಳಗಳನ್ನು ತಕ್ಷಣವೇ ಗುರುತಿಸಬೇಕು, ಕಾನೂನು ಪ್ರಕಾರ ರಾಯಲ್ಟಿ ಪರ್ಮಿಟ್ ಪಡೆದ, ಜಿಪಿಎಸ್ ತಂತ್ರಜ್ಞಾನ ಅಳವಡಿಸಿದ ಲಾರಿಗಳಿಗೆ ಮರಳು ತುಂಬಲು ಅವಕಾಶ ನೀಡಬೇಕು.
ಜಿಲ್ಲೆಯಾದ್ಯಂತ ಜಿಪಿಎಸ್ ಅಳವಡಿಸದ, ಪರವಾನಗಿ ಪಡೆಯದ ಕೆಲ ಲಾರಿಗಳ ಮೂಲಕ ಅಕ್ರಮ ಮರಳು ಸಾಗಾಣೆ ನಡೆಸಲಾಗುತ್ತಿದೆ. ಈ ದಂಧೆಯಿಂದ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ರಾಜಧನ ವಂಚಿಸಲಾಗುತ್ತಿದ್ದು, ಅಕ್ರಮ ಮರಳು ಸಾಗಾಣೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಮಂಜುನಾಥ್, ಏಜಾಜ್ ಅಹ್ಮದ್ ಇದ್ದರು.