ವಿದ್ಯುತ್ ಸಂಪರ್ಕ: ಮೆಸ್ಕಾಂಗೆ ನೋಟಿಸ್
ಬೆಂಗಳೂರು: ಶಿವಮೊಗ್ಗದ ವಿವಿಧ ಬಡಾವಣೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸದ ಆರೋಪಕ್ಕೆ ಸಂಬಂಧಿಸಿದಂತೆ ಮೆಸ್ಕಾಂಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ವಿದ್ಯುತ್ ವ್ಯವಸ್ಥೆ ಕೋರಿ ಸಿಲಿಕಾನ್ ಸಿಟಿ ಸೊಸೈಟಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ.ಶ್ರೀಧರ್ರಾವ್ ಹಾಗೂ ನ್ಯಾ.ಅಬ್ದುಲ್ ನಜೀರ್ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
ಶಿವಮೊಗ್ಗದ ವಿವಿಧ ಬಡಾವಣೆಗಳ 350 ಕುಟುಂಬಗಳಿಗೆ ದಶಕಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ. ಈ ಹಿಂದೆ ಸ್ಥಳೀಯರ ಪ್ರತಿಭಟನೆ ಹಿನ್ನೆಲೆಯಲ್ಲಿ 100 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿತ್ತಾದರೂ, ನಂತರ ಮೆಸ್ಕಾಂ ಈ ಮನೆಗಳ ವಿದ್ಯುತ್ ಮೀಟರ್ ಅನ್ನು ಕಿತ್ತೊಯ್ದಿದ್ದಾರೆ. ಆದರೆ, ಯಾವುದೇ ಕಾರಣ ನೀಡಿಲ್ಲ. ಇದರಿಂದ ಈ ಬಡಾವಣೆಗಳಲ್ಲಿ ಕೇವಲ ವಿದ್ಯುತ್ ಕಂಬಗಳಷ್ಟೇ ಉಳಿದುಕೊಂಡಿದೆ. ಆದ್ದರಿಂದ ತಮಗೆ ವಿದ್ಯುತ್ ಒದಗಿಸುವಂತೆ ಮೆಸ್ಕಾಂ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.