'ಕರ್ನಾಟಕ ಸಂಗೀತಕ್ಕೆ ದಾಸರು ಬುನಾದಿ'
ಭದ್ರಾವತಿ: ಸಂಗೀತಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರು ಎಂದು ಗಾಯಕಿ ಪದ್ಮ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಮಹಿಳಾ ಸೇವಾ ಸಮಾಜ ಪಟ್ಟಣದ ವಾಸವಿ ವಿದ್ಯಾಲಯದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪುರಂದರ ದಾಸರ ಮಾಯಾಮಾಳವಗೌಳದಲ್ಲಿನ ಸರಳ ಕೀರ್ತನೆಗಳನ್ನು ಕಲಿಯದೆ ಸಂಗೀತ ಪೂರ್ಣವಾಗುವುದೇ ಇಲ್ಲವೆಂದರು. ತ್ಯಾಗರಾಜರ ಬಗ್ಗೆ ಮತ್ತು ಅವರ ಪಂಚರತ್ನ ಕೃತಿಗಳ ಬಗ್ಗೆಯೂ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಗೀತ ಪರೀಕ್ಷೆಯಲ್ಲಿ ಸೀನಿಯರ್ ವಿಭಾಗದಲ್ಲಿ ಭದ್ರಾವತಿ ತಾಲೂಕಿಗೆ ಅತಿ ಹೆಚ್ಚು ಅಂಕಗಳನ್ನು ಗಳಿಸಿ ತೇರ್ಗಡೆಯಾದ ಬನಶಂಕರಮ್ಮ ಅವರಿಗೆ ಸಂಗೀತ ವಿದುಷಿ ದಿ. ಹನುಂತಮ್ಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ಮತ್ತು ಜೂನಿಯರ್ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಪಂಚಮ್ಗೆ ಮಹಿಳಾ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಪಿಳ್ಳಾರಿ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಲೀಲಾ ಜಗದೀಶ್ ಪ್ರಾರ್ಥಿಸಿದರು. ಲೋಹಿತಾ ನಂಜಪ್ಪ ಸ್ವಾಗತಿಸಿದರು. ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪಲತಾ ಚಂದ್ರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾರದಾ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.