'ಲವ್ ಜಿಹಾದ್ ಬಗ್ಗೆ ಎಚ್ಚರ'
ಸಾಗರ: ಮುಗ್ದ ಹೆಣ್ಣುಮಕ್ಕಳ ಮನಸ್ಸನ್ನು ಕೆಡಿಸಿ, ಅವರನ್ನು ಲವ್ ಜಿಹಾದ್‌ನಂತಹ ಚೌಕಟ್ಟಿನಲ್ಲಿ ಸಿಲುಕಿಸಿ ಮತಾಂತರಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಪೋಷಕರು ಹಾಗೂ ಸಮಾಜ ಈ ಬಗ್ಗೆ ಹೆಚ್ಚು ಜಾಗೃತೆಯಿಂದ ಇರಬೇಕು ಎಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಇಲ್ಲಿನ ವೀರಶೈವ ಕಲ್ಯಾಣಮಂಟಪದಲ್ಲಿ ಭಾನುವಾರ ಶಿವಮೊಗ್ಗದ ಗುರುಶಾಂತವೀರೇಶ್ವರ ಸೇವಾ ಸಮಿತಿಯಿಂದ ಆಯೋಜಿಸಿದ್ದ ನೂತನ ಶಾಖಾ ಕಚೇರಿ ಉದ್ಘಾಟನೆ, ವೀರಶೈವ ವಧೂವರರ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಲವ್ ಜಿಹಾದ್ ಅಂತಾರಾಷ್ಟ್ರೀಯ ಷಡ್ಯಂತ್ರವಾಗಿದೆ. ಮುಗ್ದ ಹೆಣ್ಣುಮಕ್ಕಳು ಯಾವುದ್ಯಾವುದೋ ಆಮಿಷಗಳಿಗೆ ಒಳಗಾಗುವ ಸಂದಿಗ್ದತೆ ಸೃಷ್ಟಿಸುವ ವ್ಯವಸ್ಥಿತ ಜಾಲ ನಮ್ಮ ನಡುವೆ ಕಾರ್ಯನಿರ್ವಹಿಸುತ್ತಿದೆ. ಮುಗ್ದತೆಯನ್ನು ದುರುಪಯೋಗಪಡಿಸಿಕೊಳ್ಳುವ ಇಂತಹ ಕುತಂತ್ರದ ವಿರುದ್ಧ ಜನಜಾಗೃತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಂತಹ ವಧುವರರ ಅನ್ವೇಷಣಾ ಕೇಂದ್ರಗಳು ಮಹತ್ವದ ಪಾತ್ರವಹಿಸುತ್ತದೆ ಎಂದರು. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಹೊಣೆಗಾರಿಕೆ ಏನು ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಗುರುಶಾಂತವೀರೇಶ್ವರ ಸೇವಾ ಸಮಿತಿ ಈತನಕ ಮೂರು ಸಾವಿರ ಮದುವೆ ಮಾಡಿಸಿರುವುದು ಶ್ಲಾಘನೀಯ ಎಂದು ಹೇಳಿದರು.