'ನಮ್ಮ ಗ್ರಾಮ ನಮ್ಮ ಸೇವೆ' ಬಾಗಿಲಿಗೆ
ಚಿತ್ರದುರ್ಗ: ಮನೆ ಬಾಗಿಲಿಗೇ ಸರ್ಕಾರಿ ಯೋಜನೆಗಳ ಸೇವೆಗಳು ಜಿಲ್ಲೆಯಲ್ಲಿ ಲಭಿಸುತ್ತಿವೆ. ಇದು ಉತ್ಪ್ರೇಕ್ಷೆಯೇನೂ ಅಲ್ಲ. ಚಿತ್ರದುರ್ಗ ಜಿಲ್ಲಾಡಳಿತ ಗ್ರಾಮಸ್ಥರ ಮನೆ ಬಾಗಿಲಿಗೇ ಎಲ್ಲ ಸೇವೆಗಳನ್ನೂ ಒದಗಿಸುವ ಕ್ರಾಂತಿಕಾರಿ ಕ್ರಮ ಕೈಗೊಂಡಿದ್ದು, ಅದಕ್ಕೆ 'ನಮ್ಮ ಗ್ರಾಮ, ನಮ್ಮ ಸೇವೆ' ಎಂದು ಹೆಸರಿಸಿದೆ.
ಇಂತಹ ಯೋಜನೆ ಇಡೀ ರಾಜ್ಯದಲ್ಲೇ ಪ್ರಥಮವಾಗಿ ಆರಂಭಗೊಂಡಿದ್ದು, ಸೇವೆ ಪಡೆಯುವವರಿಗೆ ತೃಪ್ತಿ ತಂದಿದೆ. ಸರ್ಕಾರಿ ಕಚೇರಿಗಳಿಗೆ ಅಲೆದಲೆದು ಬೇಸತ್ತು ಹೋಗಿದ್ದ ಜನರಿಗೆ ಅಚ್ಚರಿಯನ್ನೂ ಮೂಡಿಸಿದೆ.
ಜಿಲ್ಲಾಡಳಿತ ಆಡಳಿತ ಯಂತ್ರವನ್ನು ಜನರ ಸೇವೆಗೆ ತೊಡಗಿಸಿದ್ದು, ಕ್ರಮಬದ್ಧವಾಗಿ ಯೋಜಿಸಿ ಚಿತ್ರದುರ್ಗ ತಾಲೂಕಿನ 43 ಗ್ರಾಮಗಳಿಗೆ ಸೇವೆ ನೀಡುತ್ತಿದೆ. ಗ್ರಾಮದ ಮತ್ತು ಗ್ರಾಮಸ್ಥರ ಸಂಪೂರ್ಣ ವಿವರಗಳು ಗ್ರಾಮ ಲೆಕ್ಕಿಗರ ಬಳಿ ಲಭ್ಯವಿದೆ.
ಮಾಸಾಶನ, ಪ್ರಮಾಣಪತ್ರ....: ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಾದ ವಿಧವಾ ಮಾಸಾಶನ, ವೃದ್ಧರ ಮಾಸಾಶನ, ವಿಕಲಾಂಗರ ಮಾಸಾಶನ, ಪಡಿತರ ಚೀಟಿ, ಪಹಣಿ ತಿದ್ದುಪಡಿ, ಖಾತೆ ಬದಲಾವಣೆ, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಗ್ರಾಮಸ್ಥರ ಮನೆ ಬಾಗಿಲಿಗೇ ಪೂರೈಕೆ ಮಾಡಲಾಗುವುದು. 43 ಗ್ರಾಮಗಳ ಗ್ರಾಮ ಲೆಕ್ಕಿಗರು ಪ್ರತಿಯೊಂದು ಕುಟುಂಬದ ಮೂರು ತಲೆಮಾರುಗಳ ವಿವರಗಳು, ವಿಳಾಸ, ಸಂಪರ್ಕ ಸಂಖ್ಯೆ ಮತ್ತಿತರೆ ವಿವರಗಳನ್ನು ಸಂಗ್ರಹಿಸಿದ್ದಾರೆ.
ಎಲ್ಲ 43 ಗ್ರಾಮಗಳ ಸಮೀಕ್ಷಾ ಕಾರ್ಯ ಮುಗಿದಿದೆ. ನಾಲ್ಕು ಹೋಬಳಿಗ ವ್ಯಾಪ್ತಿಯ ಗ್ರಾಮಗಳ 607 ಫಲಾನುಭವಿಗಳ ಪಟ್ಟಿ ಮಾಡಲಾಗಿದೆ. ಈ ಪೈಕಿ 262 ಸಂಧ್ಯಾ ಸುರಕ್ಷಾ ಪಿಂಚಣಿ, 103 ವಿಧವಾ ವೇತನ, 33 ವಿಕಲಾಂಗರ ವೇತನ, 4 ನಿವಾಸ ಪ್ರಮಾಣಪತ್ರ, 35 ಆದಾಯ ಮತ್ತು ಜಾತಿ ಪ್ರಮಾಣಪತ್ರ, 35 ಪರಿಶಿಷ್ಟ ಜಾತಿ ಪ್ರಮಾಣಪತ್ರ, 43 ಪರಿಶಿಷ್ಟ ಪಂಗಡ ಪ್ರಮಾಣಪತ್ರ, 71 ಆಮ್ ಆದ್ಮಿ ಫಲಾನುಭವಿ, 5 ಜನ್ಮ ಪ್ರಮಾಣಪತ್ರ, 16 ಖಾತೆ ಬದಲಾವಣೆ ಅರ್ಜಿಗಳಿವೆ.
ಡಿಸಿ ಕನಸಿನ ಕೂಸು: ಈ ಕಾರ್ಯಕ್ರಮ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಅವರ ಕನಸಿನ ಕೂಸು. ಇಕ್ಕೇರಿ ಅವರು ಇದು ಸ್ವಯಂ ಸ್ಫೂರ್ತಿಯಿಂದ ಆಗಬೇಕಾದ ಕೆಲಸ. ಒತ್ತಾಯಪೂರ್ವಕವಲ್ಲ. ಆದ್ದರಿಂದ ಅಧಿಕಾರಿಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುತ್ತಿದ್ದೇವೆ. ಪ್ರಾಯೋಗಿಕವಾಗಿ ಎಲ್ಲ ಸಮಸ್ಯೆಗಳನ್ನು ಅರಿತುಕೊಳ್ಳುವ ಸಲುವಾಗಿ 4 3 ಗ್ರಾಮಗಳಿಗೆ ಸೇವೆ ನೀಡಲಾಗಿದೆ. ಗ್ರಾಮಗಳಲ್ಲಿ ಯಾವುದೇ ಫಲಾನುಭವಿ ಇಲ್ಲದಂತೆ ಮಾಡುವುದು ಮುಖ್ಯ ಉದ್ದೇಶ.
ಸರ್ಕಾರಿ ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದು ಇದರಿಂದ ತಪ್ಪುತ್ತದೆ. ಮಧ್ಯವರ್ತಿಗಳ ಹಾವಳಿಯೂ ಇಲ್ಲದಂತಾಗುತ್ತದೆ. ಮುಂದಿನ ದಿನಗಳಲ್ಲಿ ಯೋಜನೆಯನ್ನು ಇಡೀ ಜಿಲ್ಲೆಗೆ ವಿಸ್ತರಿಸುವ ಚಿಂತನೆಯಿದೆ ಎನ್ನುತ್ತಾರೆ.
ಮನೆ ಬಾಗಿಲಿಗೆ: ದ್ಯಾಮವ್ವನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಜಿ.ಬಿ. ಲೋಕೇಶ್ ಮಾತನಾಡಿ, ಸರ್ಕಾರ ನಮ್ಮ ಮನೆ ಬಾಗಿಲಿಗೇ ಬಂದಿದೆ. ಇದರಿಂದ ಅಭಿವೃದ್ಧಿಗಾಗಿ ಹಾಕಿಕೊಂಡ ಯೋಜನೆಗಳು ಸಮಸ್ಯೆ ಇಲ್ಲದಂತೆ ಪರಿಹಾರವಾಗುತ್ತವೆ. ಗ್ರಾಮ ಲೆಕ್ಕಿಗರು ಪ್ರತಿಯೊಂದು ಮನೆಗೂ 2-3 ಬಾರಿ ಭೇಟಿ ನೀಡಿ ವಿವರ ಸಂಗ್ರಹಿಸಿದ್ದಾರೆ. ಗ್ರಾಮದಲ್ಲಿ ನಡೆಯಬೇಕಾದ ಕಾಮಗಾರಿಗಳ ಪಟ್ಟಿಯನ್ನೂ ನೀಡಲಾಗಿದೆ ಎನ್ನುತ್ತಾರೆ.
ಆಯ್ಕೆಯಾದ ಗ್ರಾಮಗಳು: ಬಾಬು ಜಗಜೀವನರಾಂ ನಗರ, ಕಳ್ಳಿರೊಪ್ಪ, ಗೋನೂರು, ಮುತ್ತಯ್ಯನಹಟ್ಟಿ, ಗುಡ್ಡದ ರಂಗವ್ವನಹಳ್ಳಿ, ಹೊಸ ದ್ಯಾಮವ್ವನಹಳ್ಳಿ, ಒರಗುಂಟ ಮಾಳಿಗೆ, ಹಾಲಪ್ಪನಹಟ್ಟಿ, ದೇವಪುರದಹಟ್ಟಿ, ಗಂಜಿಗಟ್ಟೆ, ಬಾಪೂಜಿನಗರ, ಕಾಟಿಹಳ್ಳಿ, ತಮಟಕಲ್ಲು, ಕರಿಹಟ್ಟಿ, ಜೆ.ಸಿ. ಹಳ್ಳಿ ಲಂಬಾಣಿಹಟ್ಟಿ, ಚಿಕ್ಕಗುಂಟನೂರು, ಹೊಸಹಳ್ಳಿ ಉಪ್ಪಾರಹಟ್ಟಿ, ಕೊಡಗವಳ್ಳಿ, ಮಳಲಿ, ಹುಲ್ಲೂರು ಲಂಬಾಣಿಹಟ್ಟಿ, ತಿರುಮಲಾಪುರ, ಮಾಳೇನಹಳ್ಳಿ, ಕೆ. ಬಳ್ಳೆಕಟ್ಟೆ, ಗುತ್ತಿನಾಡು, ಚಿಕ್ಕಪುರ, ಮೇಗಳಹಳ್ಳಿ, ಕಸವನಹಳ್ಳಿ, ಎಮ್ಮೆಹಟ್ಟಿ, ಎಮ್ಮನಹಟ್ಟಿ, ಪಾಮರಹಳ್ಳಿ, ಕರಿಯಣ್ಣನಹಳ್ಳಿ, ಬಸ್ತಿಹಳ್ಳಿ, ಅಡವಿ ಗೊಲ್ಲರಹಟ್ಟಿ, ಲಿಂಗವ್ವನಾಗತಿಹಳ್ಳಿ, ಬೊಮ್ಮವ್ವನಾಗತಿಹಳ್ಳಿ, ಹಳವುದರ, ದೊಡ್ಡಿಗನಾಳು, ಮ್ಯಾಸರಹಟ್ಟಿ, ಚಿಕ್ಕಜಗಲೂರು, ಗೊಲ್ಲರಹಟ್ಟಿ, ಮುದ್ದಾಪುರ ಮ್ಯಾಸರಹಟ್ಟಿ, ಬಗ್ಗಲ ರಂಗವ್ವನಹಳ್ಳಿ, ಸೂರೇನಹಳ್ಳಿ ಗೊಲ್ಲರಹಟ್ಟಿ.