ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಯಕ್ಷಗಾನದಿಂದ ಪ್ರೇಕ್ಷಕರ ಜ್ಞಾನ ಹೆಚ್ಚಿಸಬೇಕಿದೆ

Lingaraj Badiger
Updated On : 19 Feb 2013, 10:39 am

ಸಾಗರ: ಯಕ್ಷಗಾನ ಕಥಾನಕದ ಮೂಲಕ ಪ್ರೇಕ್ಷಕರ ಜ್ಞಾನ ವಿಸ್ತಾರಗೊಳ್ಳಬೇಕು ಎಂದು ಸಿದ್ದಾಪುರದ ತಹಶೀಲ್ದಾರ್ ಗಣಪತಿ ಕಟ್ಟಿನಕೆರೆ ಹೇಳಿದರು.
ಇಲ್ಲಿನ ಯಕ್ಷಾಭಿಮಾನಿ ಬಳಗ ಏರ್ಪಡಿಸಿದ್ದ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಸಂಘಟಕ ಶುಂಠಿ ಸತ್ಯನಾರಾಯಣ ಭಟ್ ಅವರನ್ನು ಸನ್ಮಾನಿಸಿ ಮಾತನಾಡಿ, ಯಕ್ಷಗಾನ ಸಂಘಟನೆ ಬಹಳ ಕಷ್ಟ ಕೆಲಸ ಎಂದು ಅಭಿಪ್ರಾಯಪಟ್ಟರು.
ಕಲೆ ಪ್ರೋತ್ಸಾಹಿಸಿ: ಯಕ್ಷಗಾನದಂತಹ ಕಲಾ ಪ್ರದರ್ಶನಕ್ಕೆ ಆರ್ಥಿಕ ಸಹಕಾರ ನೀಡುವವರು ಪ್ರೇಕ್ಷರಾಗಿಯೂ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದ ಅವರು, ಯಕ್ಷಗಾನ ಕಲಾವಿದರು ಕಲೆಗೆ ಜೀವ ತುಂಬಬೇಕು. ಉತ್ತಮ ಕಥಾ ಪ್ರಸಂಗವನ್ನು ಪ್ರೇಕ್ಷಕರಿಗೆ ಉಣಬಡಿಸಬೇಕು. ಹೊಸ ಅನುಭವದ ಮೂಲಕ ಅವರ ಜ್ಞಾನಶಾಖೆ ವಿಸ್ತಾರಗೊಳ್ಳಬೇಕು ಎಂದರು.
ಉದ್ಯಮಿ ಅಶ್ವಿನಿಕುಮಾರ್, ಯಕ್ಷಗಾನ ಕಲೆ ಭಾರತೀಯ ಸಂಸ್ಕೃಯ ಪ್ರತೀಕ. ಇದನ್ನು ಬೆಳೆಸಲು ಸತ್ಯನಾರಾಯಣ ಭಟ್ಟರು ಹಲವು ರೀತಿಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಸಂಘಟಕರ ಪ್ರಯತ್ನದಿಂದ ಇಂದು ಯಕ್ಷಗಾನ ಕಲೆಗೆ ಹೊಸ ಮೆರಗು ಬಂದಿದೆ. ಬಹು ಮಾಧ್ಯಮದ ಹಾವಳಿಯಲ್ಲಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದರು.
ಸಂಘಟಕರಿಗೆ ಸಂಕಟ: ಸನ್ಮಾನಿತ ಶುಂಠಿ ಸತ್ಯನಾರಾಯಣ ಭಟ್, ಸಂಘಟಕರಿಗೆ ಸಂಕಟವೇ ಹೆಚ್ಚು. ನಿಗದಿತ ದಿನಕ್ಕೆ ಕಲಾವಿದರು ಬರಬೇಕು. ಅವರಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಸಿದ್ಧಪಡಿಸಬೇಕು. ಕಲಾವಿದರು ಕೈ ಕೊಟ್ಟಾಗ ಸಂಘಟಕರ ಪಾಡು ಅಸಹನೀಯ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ದಾನಿ ಎ.ಎನ್. ವೆಂಕಟಕೃಷ್ಣ, ಉದ್ಯಮಿ ಶ್ರೀನಿವಾಸ್, ನಿವೃತ್ತ ಕೆಇಬಿ ಅಧಿಕಾರಿ ರಾಮಣ್ಣ, ಯಕ್ಷಾಭಿಮಾನಿ ಬಳಗದ ಪ್ರಶಾಂತ್, ಚಂದ್ರಮೋಹನ್, ಉಮೇಶ್, ಪ್ರಸನ್ನ ಹಾಜರಿದ್ದರು. ನಂತರ ಚಂದ್ರಹಾಸ ಚರಿತ್ರೆ ಮತ್ತು ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement