ಸ್ವಾಸ್ಥ್ಯ ಭೀಮಾ ಏಪ್ರಿಲ್ಗೆ 1.80 ಲಕ್ಷ ಗುರಿ
ಶಿವಮೊಗ್ಗ: ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆ ಮುಂದಿನ ಏಪ್ರಿಲ್ ವೇಳೆಗೆ ಜಿಲ್ಲೆಯಲ್ಲಿ 1.80 ಲಕ್ಷ ನೋಂದಣಿಮಾಡುವಂತೆ ಕಾರ್ಮಿಕ ಇಲಾಖೆಗೆ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಗುರಿ ನೀಡಿದ್ದಾರೆ.
ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆ ಅನುಷ್ಠಾನ ಕುರಿತು ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಈ ವರೆಗೆ ಶೇಕಡಾ 62ರ ಸಾಧನೆ ತೃಪ್ತಿದಾಯಕವಲ್ಲ. ಸ್ವಾಸ್ಥ್ಯ ಭಿಮಾ ಯೋಜನೆ ಅತ್ಯಂತ ಉತ್ತಮ ಯೋಜನೆಯಾಗಿದ್ದು, ಮುಂದಿನ ಏಪ್ರಿಲ್ ಹೊತ್ತಿಗೆ ಶೇಕಡಾ 100 ಫಲಿತಾಂಶ ಅನುಷ್ಠಾನ ಮಾಡುವಂತೆ ಪ್ರೇರೇಪಿಸಿದರು.
ಯೋಜನೆ ವ್ಯಾಪ್ತಿಗೆ 1,23,495 ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳು ಇದ್ದು, ಈವರೆಗೆ 76,650 ಕುಟುಂಬಗಳು ಮಾತ್ರ ನೋಂದಣೆ ಮಾಡಿಕೊಂಡಿವೆ. ಪೂರ್ಣ ಪ್ರಮಾಣದಲ್ಲಿ ಯೋಜನೆ ಅನುಷ್ಠಾನಗೊಂಡರೆ ಎಲ್ಲ ಬಡವರಿಗೆ ಯೋಜನೆ ಲಾಭ ಸಿಕ್ಕಂತಾಗುತ್ತದೆ ಎಂದರು.
ಪ್ರತಿ ಫಲಾನುಭವಿ ಕುಟುಂಬ ವಾರ್ಷಿಕ 30 ಸಾವಿರದವರೆಗೆ ಉಚಿತ ಆರೋಗ್ಯ ಚಿಕಿತ್ಸಾ ಸೌಲಭ್ಯ ಪಡೆಬಹುದಾಗಿದೆ.
ಅಲ್ಲದೆ, ಸುಮಾರು 1090ಕ್ಕೂ ಹೆಚ್ಚು ಕಾಯಿಲೆಗಳಿಗೆ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸೌಲಭ್ಯ ಇರುವುದರಿಂದ ಅತ್ಯಂತ ಉಪಯುಕ್ತ ಯೋಜನೆ ಇದಾಗಿದೆ. ಈ ಬಗ್ಗೆ ಹೆಚ್ಚಿನ ಜಾಗೃತಿಯ ಅವಶ್ಯಕತೆ ಇದೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯರ ನಿರಾಸಕ್ತಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಈ ಯೋಜನೆಯಲ್ಲಿ ವೈದ್ಯರು ಉಚಿತವಾಗಿ ಚಿಕಿತ್ಸೆ ಮಾಡುವ ಅಗತ್ಯವಿಲ್ಲ. ಶೇ.50ರಷ್ಟು ಹಣ ಸಂದಾಯವಾಗುವುದರಿಂದ ವೈದ್ಯರಿಗೂ ಹಾಗೂ ವೈದ್ಯಕೀಯ ಸಂಸ್ಥೆಗೂ ಲಾಭವಿದೆ. ಈ ಬಗ್ಗೆ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರು ಆಸಕ್ತಿ ವಹಿಸಬೇಕು ಎಂದರು.
ಅನುಷ್ಠಾನ ಸಮಿತಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.