'ಪರಿಸರ ಜಾಗೃತಿ ಅಳವಡಿಸಿಕೊಳ್ಳಿ'
ಕಡೂರು: ಪ್ರತಿಯೊಬ್ಬ ಮನುಷ್ಯನೂ ಜೀವನದಲ್ಲಿ ಆಧ್ಯಾತ್ಮದ ಸೆಲೆ ಕಂಡುಕೊಂಡರೆ ಉತ್ತಮ ಜೀವನ ನಡೆಸಬಹುದು ಎಂದು ಗಿರಿಯಾಪುರದ ಶಿವಾಧ್ವೈತ ತತ್ವ ಪ್ರಚಾರ ಕೇಂದ್ರದ ಜಿ.ಸಿ. ಸಿದ್ದಪ್ಪ ಹೇಳಿದರು.
ತಾಲೂಕು ಕಸಾಪ ಮತ್ತು ಗಿರಿಯಾಪುರದ ಗುರುಕೃಪ ಪ್ರೌಢಶಾಲೆ, ಹಿರೇನಲ್ಲೂರು ಹೋಬಳಿ ಕಸಾಪ ದತ್ತಿ, ಸಿದ್ದಮ್ಮ ಮತ್ತ ಲಿಂಗದಹಳ್ಳಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗಿಡಗಳಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಕಾಳಜಿ ಹೊಂದಿ: ಮಾನವನು ಪರಿಸರ ಜಾಗೃತಿಯನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಕೂಡ ಒಂದೊಂದು ಗಿಡವನ್ನು ತಮ್ಮ ಮಕ್ಕಳಂತೆ ಪೋಷಿಸಿ ಬೆಳೆಸುವ ಮೂಲಕ ಪರಿಸರ ಕಾಳಜಿ ಹೊಂದಬೇಕು ಎಂದು ಹೇಳಿದರು.
ಬೀರೂರಿನ ನಿವೃತ್ತ ಪ್ರಾಧ್ಯಾಪಕ ಕರಿಬಸಪ್ಪ ಉಪನ್ಯಾಸ ನೀಡಿ,ಪ್ರತಿಯೊಬ್ಬರೂ ಕೂಡ ಶಿಕ್ಷಣ ಮತ್ತು ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡಾಗ ಜೀವನಕ್ಕೆ ಒಂದು ದಾರಿ ಸಿಗುತ್ತದೆ. ನಮ್ಮೊಳಗಿರುವ ಆತ್ಮಶಕ್ತಿ ಬಗ್ಗೆ ನಾವು ನಂಬಿಕೆ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಗುರುಕೃಪ ಪ್ರೌಢಶಾಲೆ ಅಧ್ಯಕ್ಷ ಜಿ.ಎಚ್. ಕಾಶೀನಾಥ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರಿಯಾಪುರ ಶಾಲೆಯ ಮುಖ್ಯ ಶಿಕ್ಷಕ ಜಿ.ಬಸವರಾಜಪ್ಪ, ಗಿರಿಯಾಪುರ ಗ್ರಾಪಂ ಕಸಾಪ ಘಟಕದ ಅಧ್ಯಕ್ಷ ರೇವಣಸಿದ್ದಪ್ಪ, ಶಿಕ್ಷಕ ಹನಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.