ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜಿಲ್ಲೆಯಲ್ಲಿ ಮುಷ್ಕರ ಭಾಗಶಃ ಯಶಸ್ವಿ

Lingaraj Badiger
Updated On : 21 Feb 2013, 11:06 am

ಚಿತ್ರದುರ್ಗ: ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಎರಡು ದಿನಗಳ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಮತ್ತು ಸ್ವಯಂ ಪ್ರೇರಿತ ಬಂದ್‌ಗೆ ನೀಡಿದ್ದ ಕರೆ ಜಿಲ್ಲೆಯಲ್ಲಿ ಭಾಗಶಃ ಯಶಸ್ವಿಯಾಗಿದೆ.
ಬೆಳಿಗ್ಗೆಯಿಂದಲೇ ಸಂಘಟನೆಗಳು ತಮ್ಮ ಕಾರ್ಯಕರ್ತರ ಜೊತೆಯಲ್ಲಿ ಬಂದ್ ಮಾಡಿಸಲು ಮುಂದಾಗಿದ್ದು ಕಂಡು ಬಂದಿತು. ದೇಶದ 11 ಕೇಂದ್ರ ಕಾರ್ಮಿಕ ಸಂಘಟನೆಗಳು ರಾಜ್ಯ ಮಟ್ಟದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯನ್ನು ರಚಿಸಿ ಕೇಂದ್ರದ ಜನ ವಿರೋಧಿ ನೀತಿ, ಬೆಲೆ ಏರಿಕೆ ನಿಯಂತ್ರಣ, ಉದ್ಯೋಗ ಸೃಷ್ಟಿ, ಪಿಂಚಣಿ, ಪಡಿತರ ವ್ಯವಸ್ಥೆ ಸಾರ್ವತ್ರೀಕರಣ, ಕಾರ್ಮಿಕ ಕಾನೂನುಗಳ ಜಾರಿ ಕನಿಷ್ಟ ಕೂಲಿ ಸೇರಿದಂತೆ ಇತರೆ ವಿಷಯವನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಕರೆ ನೀಡಿವೆ.
ವಾಹನಗಳ ಓಡಾಟ ವಿರಳ: ನಗರದಲ್ಲಿ ಬಂದ್ ಹಿನ್ನೆಲೆಯಲ್ಲಿ ಹೋಟೆಲ್, ಚಲನಚಿತ್ರ ಮಂದಿರಗಳು, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಶಾಲೆಗೆ ಸರ್ಕಾರ ಅಧಿಕೃತವಾಗಿ ರಜೆ ನೀಡದಿದ್ದರೂ ಖಾಸಗಿ ಶಾಲೆಯ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ದೃಷ್ಟಿಯಿಂದ ಶಾಲೆಗೆ ರಜೆಯನ್ನು ನೀಡಿದ್ದರು. ರಸ್ತೆಯಲ್ಲಿ ವಾಹನಗಳ ಓಡಾಟ ಸಹಾ ವಿರಳವಾಗಿದ್ದವು.
ಸದಾ ಜನತೆಯಿಂದ ಮತ್ತು ವಾಹನಗಳಿಂದ ತುಂಬಿರುತ್ತಿದ್ದ ಬಿ.ಡಿ.ರಸ್ತೆ ಬಂದ್‌ನಿಂದಾಗಿ ಓಡಾಡುವವರ ಸಂಖ್ಯೆ ವಿರಳವಾಗಿದ್ದು, ಅಂಗಡಿಗಳ ಮಾಲಿಕರು ತಮ್ಮ ಅಂಗಡಿಯ ಮುಂದೆ ಕುಳಿತು ಇಂದಿನ ವಿಷಯದ ಬಗ್ಗೆ ಮಾತನಾಡುತ್ತಿದ್ದುದು ಕಂಡು ಬಂತು. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವಾದರೂ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಕಾಣಲಿಲ್ಲ.
ಸರ್ಕಾರದ ವಿರುದ್ದ ಘೋಷಣೆ: ಇದೇ ದಿನ ಬ್ಯಾಂಕ್ ಸಿಬ್ಬಂದಿ ಬ್ಯಾಂಕಿಂಗ್ ಕೆಲಸಗಳಿಗೆ ವಿಪರೀತ ಹೊರ ಗುತ್ತಿಗೆ ನೀಡುತ್ತಿರುವುದನ್ನು ವಿರೋಧಿಸಿ ಮುಷ್ಕರ ನಡೆಸಿದರು. ನಗರದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ಆವರಣ ಬಳಿಯಲ್ಲಿ ಸೇರಿದ ವಿವಿಧ ಬ್ಯಾಂಕ್ ಸಿಬ್ಬಂದಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಶಂಕರ ಶ್ರೇಷ್ಠಿ, ಅಂಜನಪ್ಪ, ವಿಶ್ವನಾಥ್, ರಾಜಪ್ಪ ಮಾತನಾಡಿ, ನ್ಯಾಯಸಮ್ಮತ ಹೋರಾಟಕ್ಕೆ ಸರ್ಕಾರ ಮನ್ನಣೆ ನೀಡಿ ಜನಪರ ಕೆಲಸಗಳನ್ನು ಮಾಡಲಿ ಎಂದರು.
9 ಬ್ಯಾಂಕ್ ನೌಕರರ ಸಂಘಟನೆ ಭಾಗಿ: ಬ್ಯಾಂಕಿಂಗ್ ಸುಧಾರಣೆ ಮತ್ತು ಬ್ಯಾಂಕಿಂಗ್ ಕೆಲಸದಲ್ಲಿ ಹೊರಗುತ್ತಿಗೆ ವಿರೋಧಿಸಿ ದೇಶದ 9 ಬ್ಯಾಂಕ್ ನೌಕರರ ಸಂಘಟನೆಗಳ ಒಕ್ಕೂಟ ಯುನೈಟೆಡ್ ಪೋರಂ ಆಫ್ ಬ್ಯಾಂಕ್ ಯೂನಿಯನ್ ನೇತೃತ್ವದಲ್ಲಿ ಮುಷ್ಕರ ಕೈಗೊಂಡಿದ್ದು, 27 ಸಾರ್ವಜನಿಕ ವಲಯ, 12 ಖಾಸಗಿ ಮತ್ತು 8 ವಿದೇಶಿ ಬ್ಯಾಂಕುಗಳ ಸಿಬ್ಬಂದಿ ಭಾಗವಹಿಸಿದ್ದರು. ಮುಷ್ಕರದಿಂದಾಗಿ ಬ್ಯಾಂಕುಗಳನ್ನು ಮುಚ್ಚಲಾಗಿತ್ತು.
ಅಂಚೆ ಇಲಾಖೆ ನೌಕರರು ಸಹ ಮುಷ್ಕರಕ್ಕೆ ಬೆಂಬಲಿಸಿ ಪ್ರಧಾನ ಅಂಚೆ ಕಚೇರಿ ಎದುರು ಧರಣಿ ನಡೆಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಸರ್ಕಾರ ವಿಫಲ: ಬಂದ್ ಹಿನ್ನೆಲೆಯಲ್ಲಿ ನಗರದ ಸಂತೇಪೇಟೆ ವೃತ್ತದಲ್ಲಿ ಮಾತನಾಡಿದ ಎಐಟಿಯುಸಿ ಕಾರ್ಯದರ್ಶಿ ಚಂದ್ರಪ್ಪ, ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿದ್ದು, ಅದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಚುನಾವಣೆ ಸಮಯದಲ್ಲಿ ಮತವನ್ನು ಪಡೆಯುವಾಗ ವಿಭಜನೆ ಮಾಡದ ಚುನಾಯಿತ ಪ್ರತಿನಿಧಿಗಳು ಪಡಿತರ ವ್ಯವಸ್ಥೆ ನೀಡುವಾಗ ಮಾತ್ರ ಜನತೆಯನ್ನು ಬಿಪಿಎಲ್, ಎಪಿಎಲ್ ಎಂದು ವಿಂಗಡಣೆ ಮಾಡದೆ ಸಾರ್ವಜನಿಕವಾಗಿ ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸಬೇಕಿದೆ. ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳವನ್ನು ರದ್ದುಪಡಿಸಬೇಕು. ಕಾರ್ಮಿಕರಿಗಾಗಿ ಇರುವಂತಹ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕಿದೆ. ಇದನ್ನು ಉಲ್ಲಂಘಿಸಿದವರಿಗೆ ಬಿಗಿಯಾದ ದಂಡನೆ ನೀಡಬೇಕೆಂದು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯ ಸಾರ್ವಜನಿಕ ಉದ್ದಿಮೆಗಳ ಷೇರು ವಿಕ್ರಯ ನಿಲ್ಲಿಸಬೇಕು, ರಾಷ್ಟ್ರೀಯ ಸಮಾಜಿಕ ಸುರಕ್ಷತಾ ನಿಧಿ ಸ್ಥಾಪಿಸಿ ಅದಕ್ಕೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸಬೇಕು. ಅಸಂಘಟಿತ ಕಾರ್ಮಿಕರನ್ನು ಒಳಗೊಳ್ಳಲು ಸಾರ್ವಜನಿಕ ಸಾಮಾಜಿಕ ಭದ್ರತೆ ರೂಪಿಸಬೇಕು. ಎಲ್ಲಾ ಅಧಿಸೂಚಿತ ಕೈಗಾರಿಕಾ ಸಂಸ್ಥೆಗಳಿಗೆ ಸಾರ್ವಜನಿಕ ಖಾತ್ರಿ ಪಡಿಸುವಂತೆ ಕನಿಷ್ಟ ಕಾಯ್ದೆಗೆ ತಿದ್ದುಪಡಿ ಮಾಡಿ 10 ಸಾವಿರ ಮಾಸಿಕ ಕನಿಷ್ಟ ವೇತನವನ್ನು ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಎಂ. ಜಯಣ್ಣ, ಸಿ.ವೈ. ಶಿವರುದ್ರಪ್ಪ, ಗೌಸ್ ಪೀರ್ ಮತ್ತಿತರರು ಭಾಗವಹಿಸಿದ್ದರು.
ಹಿರಿಯೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
ಹಿರಿಯೂರು: ಎಐಟಿಯುಸಿ ಸಂಘಟನೆಯಡಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶವ್ಯಾಪಿ ಬಂದ್‌ಗೆ ಹಿರಿಯೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿತು.
ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಮತ್ತು ಶಾಲಾ ಕಾಲೇಜುಗಳನ್ನು ಬಂದ್ ಮಾಡಿಸುವ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳ ಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಲಿಲ್ಲ. ಆದರೆ ಸಂಘಟನೆಯ ಕಾರ್ಯಕರ್ತರು ಪಟ್ಟಣದ ಮುಖ್ಯರಸ್ತೆಗಳಲ್ಲಿ ಬೆಲೆಯೇರಿಕೆ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸರ್ಕಾರಗಳಿಗೆ ಧಿಕ್ಕಾರ ಹಾಕಿದರು. ಎಐಟಿಯುಸಿ ಅಂಗಸಂಸ್ಥೆಯಾದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕರ ಫೆಡರೇಷನ್ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದು, ಕಾರ್ಯಕರ್ತರು ತಾಲೂಕು ಕಚೇರಿ ಆವರಣದಲ್ಲಿ ಸಭೆ ನಡೆಸಿದರು.
ಸಭೆಯಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಎಸ್ಸಿ ಕುಮಾರ್ ಮಾತನಾಡಿ, ಕಾರ್ಮಿಕ ವರ್ಗದ ಐಕ್ಯ ಹೋರಾಟದ ಕರೆಯಲ್ಲಿ ಮುಖ್ಯವಾಗಿ ಹತ್ತು ಬೇಡಿಕೆಗಳನ್ನು ರೂಪಿಸಲಾಗಿದ್ದು ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ದೇಶದ ದುಡಿಯುವ ಜನ ಸಾಮಾನ್ಯರ ಹಿತದೃಷ್ಟಿಯಿಂದ ಹತ್ತಾರು ಸಮಸ್ಯೆಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದೆಯೆಂದು ತಿಳಿಸಿದರು.
ಕೇಂದ್ರ ಸರ್ಕಾರ ಬೆಲೆ ಏರಿಕೆ ವಿರುದ್ಧ ಕಳೆದ ಐದು ವರ್ಷಗಳಲ್ಲಿ ಯಾವುದೇ ನಿರ್ಧಿಷ್ಟ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಒಂದೆಡೆ ಅಗತ್ಯವಸ್ತುಗಳ ಬೆಲೆಯೇರಿಕೆಯಿಂದಾಗಿ ಜನಸಾಮಾನ್ಯರು ತತ್ತರಿಸುತ್ತಿದ್ದರೇ ಮತ್ತೊಂದೆಡೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಯಿಂದಾಗಿ ಎಲ್ಲ ರಂಗಗಳಿಗೂ ಸಮಸ್ಯೆಯ ಬಿಸಿ ತಟ್ಟಿದಂತಾಗಿದೆಯೆಂದು ಹೇಳಿದರು. ಈ ಹಿನ್ನೆಲೆಯಲ್ಲಿ ಲಾಭದಾಯಕವಾಗಿರುವ ಕೇಂದ್ರ ಸಾರ್ವಜನಿಕ ಕ್ಷೇತ್ರದ ಕೈಗಾರಿಕಾ ಷೇರು ಬಂಡವಾಳವನ್ನು ಮಾರಾಟ ಮಾಡುವ ಮೂಲಕ ಕಾರ್ಮಿಕರು ಮತ್ತು ದೇಶದ ಭವಿಷ್ಯಕ್ಕೆ ಮಾರಕವಾದ ನಿರ್ಣಯವನ್ನು ಕೈಗೊಳ್ಳಲಾಗಿದೆಯೆಂದು  ಆರೋಪಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ನಿರ್ಮಲ ಮತ್ತು ತಿಪ್ಪಮ್ಮ ಮಾತನಾಡಿ, ಐಸಿಡಿಎಸ್ ಯೋಜನೆಯಡಿ ದೇಶಾದ್ಯಂತ ಇಪ್ಪತ್ತೆರಡು ಲಕ್ಷಕ್ಕೂ ಹೆಚ್ಚಿನ  ರಾಜ್ಯದಲ್ಲಿ 1.25 ಲಕ್ಷಕ್ಕೂ ಹೆಚ್ಚಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದು ಶಿಶು ಅಭಿವೃದ್ಧಿ ಇಲಾಖೆಯ ಕೆಲಸಗಳಲ್ಲದೆ ಉಳಿದ ಇಲಾಖೆಗಳ ಎಲ್ಲ ಬಗೆಯ ಕೆಲಸಗಳಿಗೂ ಕಾರ್ಯಕರ್ತೆಯರನ್ನು ನಿಯೋಜಿಸಿ ಕೆಲಸ ತೆಗೆಯಲಾಗುತ್ತಿದ್ದರೂ ಅವರಿಗೆ ನೀಡುತ್ತಿರುವ ವೇತನ ಕನಿಷ್ಠ ಮಟ್ಟದ್ದಾಗಿದೆಯೆಂದು ಹೇಳಿದರು.
ಜಯರಾಮರೆಡ್ಡಿ, ಎನ್. ಶ್ರೀನಿವಾಸ್, ಸುಜಾತ, ಸಾವಿತ್ರಮ್ಮ, ಹನುಮಕ್ಕ, ಲಕ್ಷ್ಮೀದೇವಿ, ವೀರಮ್ಮ, ನಳಿನಾಕ್ಷಿ ಇದ್ದರು.
ಹೊಸದುರ್ಗ ಬಂದ್
ಹೊಸದುರ್ಗ: ತಾಲೂಕು ಎಐಟಿಯುಸಿ ನೇತೃತ್ವದಲ್ಲಿ ಅಂಗನವಾಡಿ ಫೆಡರೇಷನ್ ಇನ್ನಿತರೆ ಸಂಘಟನೆಗಳು ಬೆಲೆ ಏರಿಕೆ ವಿರೋಧಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾರ್ಮಿಕ ಮುಖಂಡ ಕೆ.ಎನ್. ರಮೇಶ್ ಮಾತನಾಡಿ, ಅಕ್ಕಿ ದರ ಗಗನಕ್ಕೇರಿದೆ, ಸೀಮೆಎಣ್ಣೆ, ಗ್ಯಾಸ್ ಸಮರ್ಪಕವಾಗಿಲ್ಲ, ಬಿಪಿಎಲ್ ಕಾರ್ಡುಗಳ ಧಾನ್ಯ ಪ್ರಮಾಣ ಇಳಿಸಿದ್ದು ಬರಗಾಲದಲ್ಲಿರುವ ಜನರಿಗೆ ಮತ್ತಷ್ಟು ಬರೆ ಎಳೆದಂತಾಗಿದೆ. ಜನಹಿತ ಮರೆತು ಆಡಳಿತ ನಡೆಸುತ್ತಿರುವ ಸರಕಾರಗಳು ಹವಾನಿಯಂತ್ರಿತ ಕೊಠಡಿಯಲ್ಲಿ ಬದುಕುವ ಅಧಿಕಾರಿ ರಾಜಕಾರಣಿಗಳಿಗೆ ಜನಸಾಮಾನ್ಯರ ಸ್ಥಿತಿಗತಿ ಅರ್ಥವಾಗುವುದಿಲ್ಲ ಎಂದು ಟೀಕಿಸಿದರು.
 ತಹಶೀಲ್ದಾರ್ ಬಾಲಕೃಷ್ಣಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಅಂಗನವಾಡಿ ಫೆಡರೇಷನ್ ರಾಜ್ಯ ಸಮಿತಿ ಸದಸ್ಯೆ  ವಿನೋದಾ ಬಾಯಿ, ಕಾರ್ಯದರ್ಶಿ ಮಂಜುಳಾ, ಅಧ್ಯಕ್ಷೆ ಸುಜಾತ, ಸೌಭಾಗ್ಯ, ಇಂದಿರಮ್ಮ, ಮಂಜುಳಾ ಮತ್ತಿತರರು ನೂರಾರು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement