ದಿಢೀರ್ ಚುನಾವಣೆ ದುರದೃಷ್ಟಕರ
ಹಿರಿಯೂರು: ರಾಜ್ಯ ರಾಜಕಾರಣ ಕವಲು ದಾರಿಯಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ಯಾರೂ ಬಯಸದೆ ಈ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬಂದಿರುವುದು ದುರದೃಷ್ಟಕರವೆಂದು ರಾಜ್ಯ ಜೆಡಿಎಸ್ ಕಾರ್ಯದರ್ಶಿ ಡಿ. ಯಶೋಧರ್ ಅಭಿಪ್ರಾಯಪಟ್ಟರು.
ಪಟ್ಟಣದ ಅವಧಾನಿ ನಗರದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಮತ್ತು ಪುರಸಭಾ ಟಿಕೆಟ್ ಆಕಾಂಕ್ಷಿಗಳ ಸಭೆ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ಆದೇಶದಲ್ಲಿ ಮಹಿಳೆಯರು ಮತ್ತು ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನಿಗದಿ ಪಡಿಸಿ ಪಟ್ಟಿ ಸಲ್ಲಿಸುವಂತೆ ಸರ್ಕಾರಗಳಿಗೆ ಆದೇಶ ನೀಡಿದ್ದಾಗ್ಯೂ ಕೇಂದ್ರ ಸರ್ಕಾರ ನಿಗದಿತ ಕಾಲಾವಧಿಯೊಳಗೆ ಜನಗಣತಿ ಅಂಕಿ ಅಂಶಗಳನ್ನು ನೀಡಲಿಲ್ಲವೆಂಬ ನೆಪವಿಟ್ಟು ಕೊಂಡು ರಾಜ್ಯ ಸರ್ಕಾರ ತೋರಿದ ವಿಳಂಬ ನೀತಿಯಿಂದಾಗಿ ಈ ದಿಢೀರ್ ಚುನಾವಣೆ ಎದುರಿಸುವಂತಾಗಿದೆಯೆಂದು ಆರೋಪಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್ ಮಾತನಾಡಿ, ಕಳೆದ ಬಾರಿ 12 ಜನ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಹೊಂದಿದ್ದರೂ ಕೂಡ ಪಟ್ಟಣದಲ್ಲಿ ಕೇವಲ 1400 ಮತಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿದೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಶಿವಪ್ರಸಾದ್‌ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಸುಮೇರ್ ಮಲ್ಶಾ, ಅಲ್ಪಸಂಖ್ಯಾತರ ಘಟಕದ ಶಕೀಲ್ ನವಾಜ್, ದೊರೆಸ್ವಾಮಿ ಖಂಡರ್, ಪನ್ನೀರ್ ಸೆಲ್ವಂ, ಕೆ.ಎಲ್. ರಾಮಸ್ವಾಮಿ, ಡಾ. ಜಗನ್ನಾಥ್, ಶಂಕರ್ ಮೂರ್ತಿ, ಮಾರಿಕಣಿವೆ ವಿಶ್ವನಾಥ್, ವಿಶ್ವನಾಥ್, ತಾಪಂ ಮಾಜಿ ಅಧ್ಯಕ್ಷೆ ಕೆ. ಮಂಜುನಾಥ್, ಯವ ಘಟಕದ ಹನುಮಂತರಾಯಪ್ಪ ಇದ್ದರು.