ಬೇಳೂರು ಕಾಂಗ್ರೆಸ್‌ಗೆ ಬೇಡ: ಕಾಗೋಡು
ಸಾಗರ: ಶಾಸಕ ಗೋಪಾಲಕೃಷ್ಣ ಬೇಳೂರು ಕಾಂಗ್ರೆಸ್ ಸೇರುವುದನ್ನು ಪಕ್ಷದ ಕಾರ್ಯಕರ್ತರು ಸೇರಿದಂತೆ ನಾನು ಸಹ ಹಿಂದಿನಿಂದಲೂ ವಿರೋಧಿಸಿಕೊಂಡು ಬಂದಿದ್ದು, ಬೇಳೂರು ಬಂದು ಪಕ್ಷವನ್ನು ಉದ್ಧಾರ ಮಾಡಬೇಕಾಗಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಬುಧವಾರ ಬೇಳೂರು ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿ, ಬೇಳೂರಿಗೆ ಪ್ರಚಾರದ ಗೀಳು. ಆದ್ದರಿಂದಲೇ ಟಿವಿಯಲ್ಲಿ ಊಹಾಪೋಹದ ಸುದ್ದಿ ಹಬ್ಬಿಸುವ ಮೂಲಕ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದರು.
ಪ್ರಚಾರವೇ ಬಂಡವಾಳ: ಟಿವಿಯಲ್ಲಿ ಪ್ರಚಾರ ಪಡೆಯುವುದನ್ನೇ ಬಂಡಾವಳ ಮಾಡಿಕೊಂಡಿರುವ ಗೇಪಾಲಕೃಷ್ಣ ದೊಡ್ಡ ನಾಯಕರಲ್ಲ. ಅವರಿಗೆ ವೈಯಕ್ತಿಕ ವರ್ಚಸ್ಸು ಇಲ್ಲ. ಒಂದು ದಿನವೂ ಶಾಸನ ಸಭೆಯಲ್ಲಿ ಕ್ಷೇತ್ರದ ಜ್ವಲಂತ ಸಮಸ್ಯೆ ಬಗ್ಗೆ ಮಾತನಾಡದೇ ಈಗ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು.
ಕ್ಷೇತ್ರದಲ್ಲಿ ಬೇಳೂರು ಕಾರ್ಯವೈಖರಿ ಬಗ್ಗೆ ಜನರು ಆಕ್ರೋಶಿತರಾಗಿದ್ದಾರೆ. ಹಣ ಹಾಗೂ ತೋಳ್ಬಲದ ಮೂಲಕ ರಾಜಕೀಯ ಮಾಡುತ್ತೇವೆ ಎನ್ನುವುದು ಬೇಳೂರು ಕನಸಿನ ಮಾತು. ಇದು ನಮ್ಮ ಕ್ಷೇತ್ರದಲ್ಲಿ ನಡೆಯುವುದಿಲ್ಲ ಎಂದು ಹೇಳಿದರು.
ನಾಲ್ಕುಬಾರಿ ಪ್ರವಾಸ: ಈಗಾಗಲೇ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ತೀರ್ಮಾನ ಕೈಗೊಂಡಿದ್ದು, ಕ್ಷೇತ್ರದಾದ್ಯಂತ ಮೂರರಿಂದ ನಾಲ್ಕು ಬಾರಿ ಪ್ರವಾಸ ಮಾಡಿದ್ದೇನೆ. ಜನರು ಕ್ಷೇತ್ರದ ಶಾಸಕರ ದಬ್ಬಾಳಿಕೆ ರಾಜಕಾರಣ ಮುಕ್ತಿಗೊಳಿಸಲು ನಾನು ಕಣದಲ್ಲಿ ಇರಬೇಕು ಎಂದು ಅಪೇಕ್ಷೆ ಪಟ್ಟಿದ್ದಾರೆ. ಭ್ರಷ್ಟಾಚಾರ ಮುಕ್ತ ಕ್ಷೇತ್ರವನ್ನಾಗಿ ಸಾಗರ ಕ್ಷೇತ್ರವನ್ನು ರೂಪಿಸುವುದು ನನ್ನ ಮುಂದಿನ ಗುರಿ ಎಂದು ಹೇಳಿದರು.
ಬೇಳೂರು ಪ್ರತಿಕ್ರಿಯೆ: ನಾನು ಬಿಜೆಪಿ ಬಿಡಲು ನಿರ್ಧರಿಸಿದ್ದು ನಿಜ. ಆದರೆ ಕಾಂಗ್ರೆಸ್ ಸೇರುವ ಕುರಿತು ಈತನಕ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಹಲವರು ಕಾಂಗ್ರೆಸ್ ಸೇರುವಂತೆ ಒತ್ತಾಯ ಮಾಡುತ್ತಿರುವುದು ಹೌದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಪ್ರತಿಕ್ರಿಯಿಸಿದ್ದಾರೆ.
ಕಳೆದ 5 ವರ್ಷದಲ್ಲಿ ಬಿಜೆಪಿ ರಾಜ್ಯದಲ್ಲಿ ಸುಮಾರು 60 ಲಕ್ಷ ಜನರಿರುವ ಈಡಿಗ ಸಮುದಾಯಕ್ಕೆ ವಂಚನೆ ಮಾಡಿದೆ. ಜನಾಂಗಕ್ಕೆ ಯಾವುದೇ ಸ್ಥಾನಮಾನ ನೀಡಿಲ್ಲ. ಹಿಂದುಳಿದ ವರ್ಗವಾಗಿರುವ ಈಡಿಗ ಸಮಾಜ ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ಕೊಡುಗೆಯಾಗಿ ನೀಡಿದೆ ಎಂದರು.