ಮದುವೆ ಆಗುವುದಾಗಿ ನಂಬಿಸಿ ಬಾಲಕಿಯ ಮೇಲೆ ಅತ್ಯಾಚಾರ
ಶಿರಾಳಕೊಪ್ಪ: ಎಳಗೇರಿ ಫ್ರೌಢಶಾಲೆಯ 9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನು ಮದುವೆ ಆಗುವುದಾಗಿ ನಂಬಿಸಿ ಅಪಹರಿಸಿ ಅತ್ಯಾಚಾರ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿಕಾರಿಪುರ ತಾಲ್ಲೂಕಿನ ಶಂಕ್ರೀಕೊಪ್ಪ ಗ್ರಾಮದ ಹತ್ತಿರದ ಎಳಗೇರಿ ಫ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ನಂಬಿಸಿ ಮಡಕೇರಿಗೆ ಕರೆದುಕೊಂಡು ಹೋಗಿ ಅವಳ ಮೇಲೆ ಹನುಮಂತಪ್ಪ ಎಂಬುವನು ಅತ್ಯಾಚಾರ ನಡೆಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾದೆ.
ಪೋಷಕರ ದೂರು: ಕಳೆದ ದಿನಾಂಕ 13ರಂದು ಶಾಲೆಗೆ ಹೋದ ಯುವತಿ ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ಶಿರಾಳಕೊಪ್ಪ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಾಗ ಆರೋಪಿ ಹನುಮಂತಪ್ಪ ಬಾಲಕಿಯೊಂದಿಗೆ ಮಡಕೇರಿಯಲ್ಲಿ ಇರುವುದು ಪತ್ತೆಯಾಯಿತು.
ಯುವತಿಯಿಂದ ವಿಷಯ ಅರಿತ ಪೊಲೀಸರು ಆರೋಪಿಯನ್ನು ಬಂಧಿಸಿದರು. ಮದುವೆ ಆಗಿ ಎರಡು ಮಕ್ಕಳ ತಂದೆ ಆಗಿರುವ ಹನುಮಂತಪ್ಪ ಬಾಲಕಿಯನ್ನು ಮದುವೆ ಆಗುವುದಾಗಿ ಮನವೊಲಿಸಿ ಆಕೆಯನ್ನು ಅಪಹರಿಸಿ ಮಡಿಕೇರಿಗೆ ಕರೆದೊಯ್ದಿದ್ದನು.
ನ್ಯಾಯಾಂಗ ಬಂಧನ: ಆರೋಪಿ ಕೊಳಗಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಪೋಷಕರು ಕೊಟ್ಟ ದೂರಿನನ್ವಯ ಶಿರಾಳಕೊಪ್ಪ ಠಾಣೆಯ ಎಸ್ಐ ಗುರುಪ್ರಸಾದ್, ಸಿಪಿಐ ಮಾದಪ್ಪ ಮಾರ್ಗದರ್ಶನದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.