ಮಠಮಾನ್ಯಗಳಿಗೆ ಬಿಎಸ್ವೈ ಕೊಡುಗೆ ಅಪಾರ
ಶಿರಾಳಕೊಪ್ಪ: ಮೊದಲಿನಿಂದಲೂ ಧಾರ್ಮಿಕ ಕಾರ್ಯಗಳಿಗೆ ಸಹಕರಿಸುತ್ತಿದ್ದ ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ನಂತರ ರಾಜ್ಯದ ದೇವಾಲಯ ಹಾಗೂ ಮಠಮಾನ್ಯಗಳಿಗೆ ಸಹಕರಿಸಲು ಮುಂದಾದರು ಎಂದು ಸಂಸದ ರಾಘವೇಂದ್ರ ಹೇಳಿದರು.
ಶಿರಾಳಕೊಪ್ಪ ಹತ್ತಿರದ ತೊಗರ್ಸಿಯಲ್ಲಿ ಪಾಂಡುರಂಗ ದೇವಸ್ಥಾನ ಸಮಿತಿ ಹಾಗೂ ಭಾವಸಾರ ಕ್ಷತ್ರಿಯ ನಾಮದೇವ ಸಿಂಪಿ ಸಮಾಜದ 21ನೇ ವರ್ಷದ ದಿಂಡಿ ಉತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ತೊಗರ್ಸಿ ಒಂದು ಐತಿಹಾಸಿಕ ಕ್ಷೇತ್ರ. ಈ ಕ್ಷೇತ್ರಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಸ್ವಾಮಿಗಳು ಈ ಕ್ಷೇತ್ರದ ಅಭಿವೃದ್ಧಿ ಆಗಬೇಕು ಎಂದಾಗ ರು. 8 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಸೇರಿದಂತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ವಿದ್ಯುತ್ ಬಗ್ಗೆ ವಿಶೇಷ ಕಾಳಜಿ: ಈ ಹಿಂದೆ ಶಿಕಾರಿಪುರ ತಾಲೂಕಿನಲ್ಲಿ ಕೇವಲ 33 ಕೆ.ವಿ. ವಿದ್ಯುತ್ ಸ್ಥಾವರವಿತ್ತು. ನಂತರ ಯಡಿಯೂರಪ್ಪ ನವರು ತಾಲೂಕಿನಲ್ಲಿ 11ಕೆವಿಯ 8ಸ್ಥಾವರ ಹಾಗೂ 220 ಕೆ.ವಿ.ಯ ಒಂದು ಸ್ಥಾವರ ಮಾಡಿ ಯಾವುದೇ ನೀರಾವರಿ ಸೌಲಭ್ಯವಿಲ್ಲದ ತಾಲೂಕಿನ ಹಲವಾರು ಭಾಗಗಳಿಗೆ ಉತ್ತಮ ವಿದ್ಯುತ್ ಕೊಡುವ ಉದ್ದೇಶದಿಂದ ಸ್ಥಾಪಿಸಿದರು ಎಂದರು.
ತಾಲೂಕಿನಲ್ಲಿ ಶಿಕಾರಿಪುರ -ಶಿರಾಳಕೊಪ್ಪಕ್ಕೆ ಕುಮುದ್ವತಿ ನದಿಯಿಂದ ಹಾಗೂ ಇತರೆಡೆಯ ಕೊಳವೆ ಬಾವಿಗಳಿಂದ ಕುಡಿಯುವ ನೀರಿಗೆ ತೊಂದರೆ ಇಲ್ಲದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕ್ಷೇತ್ರದಲ್ಲಿ ತಿಂಗಳಿಗೆ ಒಂದು ಅಥವಾ ಎರಡು ಬಾರಿ ಕುಡಿಯುವ ನೀರನ್ನು ಬಿಡುತ್ತಿದ್ದಾರೆ ಎಂದರು.
ತೊಗರ್ಸಿಯ ಪಂಚವಣ್ಣಿಗೆ ಮಠದ ಚೆನ್ನವೀರ ದೇಶೀಕೇಂದ್ರ ಶ್ರೀ, ತೊಗರ್ಸಿ ಮಳೇಹಿರೇ ಮಠದ ಮಹಂತದೇಶೀ ಕೇಂದ್ರ ಶ್ರೀ ಸಾನ್ನಿದ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಸಿಂಪಿ ಸಮಾಜದ ಅಧ್ಯಕ್ಷ ಗಜೇಂದ್ರ ಜಿಂಗಾಡೆ ವಹಿಸಿದ್ದರು.
ದೇವಸ್ಥಾನ ಸಂಸ್ಥಾಪಕ ರಾಮಚಂದ್ರಪ್ಪ ನವಲೆ, ಎಪಿಎಂಸಿ ಅಧ್ಯಕ್ಷ ಸಣ್ಣ ಹನುಮಂತಪ್ಪ, ತಾಪಂ ಮಾಜಿ ಅಧ್ಯಕ್ಷ ರೇವಣಪ್ಪ, ಗ್ರಾಪಂ ನೂತನ ಅಧ್ಯಕ್ಷೆ ಲಕ್ಷ್ಮಮ್ಮ ಸುಬ್ರಹ್ಮಣ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶ್ರೀಗಳು ಸೇರಿದಂತೆ ದೇವಸ್ಥಾನ ನಿರ್ಮಿಸಲು ಸಹಕರಿಸಿದ ಹಲವಾರು ಭಕ್ತರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕ ಚಿಕ್ಕಪ್ಪ ನಾಡಿಗೇರ್ ಹಾಗೂ ಶಾಂತಾಬಾಯಿ ನಾಡಿಗೇರ್ ದಂಪತಿಗಳನ್ನು ಸನ್ಮಾನಿಸಲಾಯಿತು.