ಅಳಿವಿನಂಚಿನ ಔಷಧೀಯ ಸಸ್ಯ ಉಳಿವಿಗೆ ಅಭಿಯಾನ
ಶಿವಮೊಗ್ಗ: ಬೆಲೆಕಟ್ಟಲಾಗದ ಅಪರೂಪದ ಆರೋಗ್ಯದಂಶಗಳನ್ನೊಳಗೊಂಡ ಸಸ್ಯ ಸಂಪತ್ತು, ಗಿಡಮೂಲಿಕೆಯನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ ಪಶ್ಚಿಮಘಟ್ಟ. ಬರು ಬರುತ್ತಾ ಈ ಸಂಪತ್ತು ವಿನಾಶದಂಚಿಗೆ ತಲುಪಿದೆ. ಅನೇಕ ಗಿಡಮೂಲಿಕೆ ಕಾಣೆಯಾಗಿದೆ. ಈ ಆತಂಕದ ನಡುವೆಯೇ ಪಶ್ಚಿಮಘಟ್ಟದ ಮಹತ್ವವನ್ನು ಮುಂದುವರಿಸುವ ಉದ್ದೇಶದಿಂದ ರೂಪುಗೊಂಡ ಹಸಿರು ಆರೋಗ್ಯ ಅಭಿಯಾನ ಸದ್ದಿಲ್ಲದೇ ಅನುಷ್ಠಾನಕ್ಕೆ ಬರುತ್ತಿದೆ.
ನಾಟಿ ವೈದ್ಯ ಪರಂಪರೆ ಬೆಳೆಸುವುದು, ಆ ಮೂಲಕ ಪಶ್ಚಿಮಘಟ್ಟದ ಅಪರೂಪದ ಸಸ್ಯರಾಶಿಯನ್ನು ಉಳಿಸುವ ಉದ್ದೇಶದಿಂದ ಪಶ್ಚಿಮಘಟ್ಟ ಕಾರ್ಯಪಡೆ ಹಸಿರು ಆರೋಗ್ಯ ಅಭಿಯಾನವನ್ನು ಜಾರಿಗೆ ತಂದಿದೆ.
ಇದಕ್ಕಾಗಿ ಮೊದಲ ಹಂತದಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿರುವ ಬರುವ ಜಿಲ್ಲೆಗಳ ನಾಟಿ ವೈದ್ಯರು, ಜನಪದ ವೈದ್ಯರು, ಆಯುರ್ವೇದ ವೈದ್ಯರು, ರೈತರನ್ನು ಒಂದು ವೇದಿಕೆಯಲ್ಲಿ ತರುವ ಪ್ರಯತ್ನ ಸಾಗಿದೆ. ಈಗಾಗಲೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಆಯ್ದ ಕಡೆಗಳಲ್ಲಿ ಈ ವೇದಿಕೆ ಸೃಷ್ಟಿಯಾಗಿದೆ.
ನಾಟಿ ವೈದ್ಯ ಪದ್ಧತಿ ಕುರಿತು ಮಾಹಿತಿ: ಇಲ್ಲಿ ಗಿಡ ಮೂಲಿಕೆಗಳನ್ನು ಗುರುತಿಸುವುದು, ನಾಟಿ ವೈದ್ಯರನ್ನು ಪರಿಚಯಿಸುವುದು, ಅವರ ಅನುಭವಗಳನ್ನು ಹಂಚಿಕೊಳ್ಳುವಂತೆ ಮಾಡುವುದು, ಸ್ಥಳೀಯ ರೋಗಗಳಿಗೆ ಅವರು ನೀಡುವ ಚಿಕಿತ್ಸೆ, ಬಳಸುವ ಮೂಲಿಕೆಗಳ ಬಗ್ಗೆ ಮಾಹಿತಿ ಹೆಕ್ಕುವುದು, ಅದಕ್ಕಿಂತ ಮುಖ್ಯವಾಗಿ ನಾಟಿ ವೈದ್ಯ ಪದ್ಧತಿಯನ್ನು ಮುಂದುವರಿಸುವ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ, ನಾಟಿ ವೈದ್ಯರು ಎದುರಿಸುತ್ತಿರುವ ಮೂಲಿಕೆಗಳ ಕೊರತೆಯನ್ನು ಗಮನಿಸಿ ಅರಣ್ಯ ಇಲಾಖೆಯಿಂದ ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ.
ಹಸಿರು ಆರೋಗ್ಯ ಅಭಿಯಾನ: ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಇನ್ನೂ ನಾಟಿ ವೈದ್ಯ ಪದ್ಧತಿ ಜೀವಂತವಾಗಿದೆ. ಇದನ್ನು ಉಳಿಸಿ ಮುಂದುವರೆಸಿಕೊಂಡು ಹೋಗುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಹಸಿರು ಆರೋಗ್ಯ ಅಭಿಯಾನ ಮಹತ್ವ ಪೂರ್ಣವಾದದ್ದು ಎನ್ನುತ್ತಾರೆ ಪುರುಷೋತ್ತಮರಾವ್ ಕೃಷಿ ಪ್ರತಿಷ್ಠಾನದ ಅರುಣ.
ಔಷಧೀಯ ಅಂಶಗಳನ್ನೊಳಗೊಂಡ ಸಸ್ಯಗಳನ್ನು ಅರಣ್ಯ ಇಲಾಖೆಯೇ ನರ್ಸರಿಯಲ್ಲಿ ಬೆಳೆಸಿ, ನಾಟಿ ವೈದ್ಯರಿಗೆ ವೈದ್ಯರಿಗೆ ನೀಡುವುದರಿಂದ ಅಪರೂಪದ ಸಂಪತ್ತು ಉಳಿಯುತ್ತದೆ, ಬೆಳೆಯುತ್ತದೆ. ಇದರಿಂದ ನಾಟಿ ವೈದ್ಯರೂ ಹರ್ಷಚಿತ್ತರಾಗಿದ್ದಾರೆ ಎಂಬುದು ಅವರ ಅಭಿಪ್ರಾಯ.
-ಶ್ರೀಕಾಂತ ಭಟ್