ವಿದ್ಯಾರ್ಥಿ ವೇತನ ವಿತರಣೆ
ಶಿವಮೊಗ್ಗ: ಪ್ರತಿಭಾವಂತ ಅದರಲ್ಲೂ ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದಂತಹ ವಿದ್ಯಾರ್ಥಿಗಳನ್ನು ಗುರುತಿಸಿ ನೀಡುವ ವಿದ್ಯಾರ್ಥಿವೇತನ ಆ ವಿದ್ಯಾರ್ಥಿಯ ಜೀವನದಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆಯಿದ್ದಂತೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥಗೌಡರು ಹೇಳಿದರು.
ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದ ಆವರಣದ ಪ್ರೊ. ಎಸ್.ಪಿ. ಹಿರೇಮಠ್ ಸಭಾಂಗಣದಲ್ಲಿ ದೀನಬಂಧು ಸೇವಾ ಟ್ರಸ್ಟ್, ದೀನಬಂಧು ಸಮಾಜಸೇವಾ ಕೇಂದ್ರ, ಸ್ಟೇಟ್ಬ್ಯಾಂಕ್ ಆಫ್ಮೈಸೂರು ಮತ್ತು ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಇಂಗ್ಲಿಷ್ ಭಾಷಾ ತರಬೇತಿ ಕಾರ್ಯಾಗಾರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂಗ್ಲಿಷ್ ಅತ್ಯಗತ್ಯ: ಇಂಗ್ಲಿಷ್ ಸಂಪರ್ಕ ಭಾಷೆಯಾಗಿರುವುದರಿಂದ ಇಂದು ಇಂಗ್ಲಿಷ್ ಕಲಿಕೆ ಮುಖ್ಯ. ನಮ್ಮ ರಾಷ್ಟ್ರಭಾಷೆ ಹಿಂದಿಯಾಗಿದ್ದರೂ ಸಂಪರ್ಕ ಭಾಷೆ ಇಂಗ್ಲಿಷ್. ಇದು ಒಂದು ಮಾಧ್ಯಮ ಹಾಗೂ ಸರಳ ಭಾಷೆ ಕೂಡ. ಇಂಗ್ಲಿಷ್ ಕಲಿಕೆ ಅತ್ಯಗತ್ಯ. ಹಾಗೆಂದಾಕ್ಷಣ ಕನ್ನಡವನ್ನು ಅಲಕ್ಷಿಸಬೇಕೆಂದಲ್ಲ ಎಂದರು.
ದೀನಬಂಧು ಟ್ರಸ್ಟ್ ಹಾಗೂ ದೀನಬಂಧು ಸಮಾಜಕೇಂದ್ರ ಈ ರೀತಿಯ ಸಮಾಜಮುಖಿ ಕಾರ್ಯ ಮಾಡುತ್ತಾ ಒಂದಷ್ಟು ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿರುವುದು ಪ್ರಶಂಸನೀಯವೆಂದು ಡಾ. ಮಂಜುನಾಥಗೌಡ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಎ. ಬಾರಿಯವರು ಮಾತನಾಡಿ, ಮೂಲಶಿಕ್ಷಣದ ಅಡಿಪಾಯ ಭದ್ರವಾಗಿರಬೇಕು. ಮಾತೃಭಾಷೆ ಜೊತೆಯಲ್ಲಿ ಮುಂದೆ ಜಾಗತೀಕರಣ ವ್ಯವಸ್ಥೆಯಲ್ಲಿ ನಾವು ಯಾರಿಗೂ ಕಡಿಮೆಯಿಲ್ಲ ಎಂಬ ಆತ್ಮಸ್ಥೈರ್ಯ ಮೂಡಲು ಇಂಗ್ಲಿಷ್ ಕಲಿಕೆ ಅತ್ಯಗತ್ಯವೆಂದರು. ಕರ್ನಾಟಕ ರಾಜ್ಯ ಅಡಕೆ ವರ್ತಕರ ಸಂಘದ ಅಧ್ಯಕ್ಷ ಎಚ್. ಓಂಕಾರಪ್ಪ, ಸ್ಥಳೀಯ ಎಸ್ಬಿಎಂ ಶಾಖಾ ವ್ಯವಸ್ಥಾಪಕ ವಿಶ್ವೇಶ ಭಟ್, ಉಪನ್ಯಾಸಕ ಎಂ.ಆರ್. ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.