ಶರಾವತಿ ಹಿನ್ನೀರಲ್ಲಿ ಆಕರ್ಷಕ ನಿಲುವುಗಲ್ಲು
ಹೊಸನಗರ: ಖಗೋಳ ವಿಜ್ಞಾನ ವೀಕ್ಷಣೆಯ ಇಂಗೇಂಡ್ನ ಸ್ಟೋನ್ಹೆಂಜ್ಗೆ ಹೋಲಿಕೆ ಮಾಡಿ ಗಮನಸೆಳೆದಿದ್ದ ತಾಲೂಕಿನ ಬೈಸೆಯಲ್ಲಿನ ನಿಲುವುಗಲ್ಲುಗಳ ಮಾದರಿಯಲ್ಲೇ ಶರಾವತಿ ಹಿನ್ನೀರು ಪ್ರದೇಶದಲ್ಲಿ ಮತ್ತಷ್ಟು ನಿಲುವುಗಲ್ಲುಗಳು ಕಂಡುಬಂದಿದ್ದು ಕುತೂಹಲ ಮೂಡಿಸಿದೆ.
ತಾಲೂಕಿನ ಕೆ.ಬಿ. ಸರ್ಕಲ್ ಮಾರ್ಗದ ಹಸಿರುಮಕ್ಕಿ ಹಿನ್ನೀರು ಪ್ರದೇಶದಲ್ಲಿ ಅಷ್ಟದಿಕ್ಕುಗಳಿಗೆ ಮುಖಮಾಡಿದ ಸಾಕಷ್ಟು ಕಲ್ಲುಗಳಿವೆ. ಅದರಲ್ಲಿ ಹಿನ್ನೀರಿನೊಳಗಿರುವ ಕಲ್ಲೊಂದು ಸುಮಾರು 7 ಅಡಿ ಎತ್ತರ ಕೋನಾಕೃತಿಯಲ್ಲಿದ್ದು, ಗಮನ ಸೆಳೆಯುತ್ತಿದೆ.
ಕೆಲವೊಂದು ಕಲ್ಲುಗಳು ತುಂಡಾಗಿ ಬಿದ್ದಿವೆ. ಭೂಮಿಯ ಹೊರಭಾಗದಿಂದ 2 ರಿಂದ 4 ಅಡಿ ಎತ್ತರ ಸೇರಿದಂತೆ 50ಕ್ಕು ಹೆಚ್ಚು ಕಲ್ಲುಗಳು ಕಂಡುಬಂದಿದೆ. ಸುಮಾರು 50 ರಿಂದ 60 ಮೀ ವ್ಯಾಪ್ತಿಯೊಳಗೆ ಎಲ್ಲಾ ಕಲ್ಲುಗಳನ್ನು ಕೋನಾಕೃತಿಯಲ್ಲಿ ಹುಗಿದಂತೆ ಕಂಡುಬರುತ್ತದೆ.
ಬೈಸೆಯ ನಂಟು: ಕಳೆದ ವರ್ಷ ಆರಂಭದಲ್ಲಿ ಬೈಸೆಯಲ್ಲಿರುವ 26 ಕಲ್ಲುಗಳನ್ನು ಉಲ್ಲೇಖಿಸಿದ್ದ ಮಣಿಪಾಲ ವಿವಿ ಮತ್ತು ಟಾಟಾ ಇನ್ಸ್ಟಿಟ್ಯೂಟ್ ವರದಿಯಲ್ಲಿ ಹಿಂದೆ ಖಗೋಳ ವೀಕ್ಷಣೆ ಮಾಡಲಾಗುತ್ತಿದ್ದ ಇಂಗೇಂಡಿನ ಸ್ಟೋನ್ಹೆಂಜ್ಗೆ ಹೋಲಿಕೆ ಮಾಡಲಾಗಿತ್ತು. ಕಿ.ಪೂ1000 ರಷ್ಟು ಪುರಾತನವಾದದ್ದು ಅಂದೇ ಖಗೋಳ ವಿಜ್ಞಾನ ವೀಕ್ಷಣೆಯಲ್ಲಿ ಭಾರತ ಮುಂದಿತ್ತು ಎಂಬುದರ ಬಗ್ಗೆ ವರದಿ ಬೆಳಕು ಚೆಲ್ಲಿತ್ತು.
ಅದರ ಬೆನ್ನಲ್ಲೇ ಹಸಿರುಮಕ್ಕಿ ಹಿನ್ನೀರು ತಾಣದಲ್ಲಿ ಅಪರೂಪದ ಕಲ್ಲುಗಳು ಪತ್ತೆಯಾಗಿದ್ದು, ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಹಿನ್ನೀರು ತೀರದಲ್ಲಿರುವ ಕಲ್ಲುಗಳು ನೀರು ತುಂಬಿದಂತೆ ಮುಳುಗಿ ಹಿನ್ನೀರು ಇಳಿದಂತೆ ಮತ್ತೆ ಕಂಡುಬರುತ್ತವೆ. ಇದಕ್ಕೂ ಮತ್ತು ಬೈಸೆಯಲ್ಲಿ ಪತ್ತೆಯಾದ ನಿಲುವುಗಲ್ಲುಗಳ ಆಕಾರದಲ್ಲಿ ಪೂರಕವಾಗಿದ್ದು, ಕಾಕತಾಳಿಯೋ ಇಲ್ಲವೇ ಖಗೋಳ ವೀಕ್ಷಣೆಯ ನಂಟು ಇದೆಯೋ ಗೊತ್ತಿಲ್ಲ. ಹಿನ್ನೀರಿನ ಕೊರೆತಕ್ಕೆ ಮಣ್ಣು ಸವಕಳಿಯಿಂದಾಗಿ ಕಲ್ಲುಗಳ ಸೃಷ್ಟಿಯಾಗಿರಬಹುದೇ ಎಂಬ ಅನುಮಾನ ಕೂಡ ಆವರಿಸುತ್ತದೆ. ಆದರೆ ತೀರದ ಕೇವಲ 60 ಮೀ ವ್ಯಾಪ್ತಿಯೊಳಗೆ ಅಷ್ಟು ಕಲ್ಲುಗಳು ಆಕಾಶಾಭಿಮುಖವಾಗಿ ಕಂಡುಬರುವುದರಿಂದ ಶೋಧನೆ ಆದಲ್ಲಿ ಮಾತ್ರ ನಿಲುವುಗಲ್ಲುಗಳ ಒಂದಷ್ಟು ಮಾಹಿತಿ ತೆಗೆಯಬಹುದಷ್ಟೆ.
- ರವಿ ಬಿದನೂರು