ಇಂದಿನಿಂದ ವಾಹನ ಸಂಚಾರ ಗಣತಿ
ಶಿವಮೊಗ್ಗ: ಲೋಕೊಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಫೆ.26ರಂದು ಬೆಳಗ್ಗೆ 6 ಗಂಟೆಯಿಂದ ಫೆ.28ರಂದು ಬೆಳಿಗ್ಗೆ 6ಗಂಟೆಯವರೆಗೆ ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸಂಚಾರ ಸಮೀಕ್ಷೆ ಕೈಗೊಳ್ಳಲಿದೆ. ಸಾರ್ವಜನಿಕರು, ಸಂಘ-ಸಂಸ್ಥೆಗಳ ವಾಹನಗಳ ಮಾಲೀಕರು-ಚಾಲಕರು ಸಹಕರಿಸುವಂತೆ ಲೋಕೊಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಸಂಸ್ಕೃತಿ ಸಮ್ಮೇಳನ
ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕುವೆಂಪು ವಿಶ್ವವಿದ್ಯಾನಿಲಯ ಸಂಯುಕ್ತ ಆಶ್ರಯದಲ್ಲಿ ನಗರದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು ಆವರಣದಲ್ಲಿ ಮಾ.2 ಮತ್ತು 3ರಂದು ಅಂತರ ಕಾಲೇಜು ವಿದ್ಯಾರ್ಥಿಗಳ ಕನ್ನಡ ಸಾಹಿತ್ಯ ಸಂಸ್ಕೃತಿ ಸಮ್ಮೇಳನ ಏರ್ಪಡಿಸಲಾಗಿದೆ.
ಮೊದಲ ದಿನ ಈ ಸಮ್ಮೇಳನವನ್ನು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಾರಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಲೇಜು ಶಿಕ್ಷಣ ನಿರ್ದೇಶನಾಲಯದ ಜಂಟಿ ನಿರ್ದೇಶಕ ಪ್ರೊ. ಸುರೇಶ್ ಗುಪ್ತ, ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯದೇವಪ್ಪ ಎಚ್. ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಪಪ್ರಚಾರ ಮಾಡಿ ಮತ ಕೇಳುವುದಿಲ್ಲ: ಸಿ.ಟಿ. ರವಿ
ಚಿಕ್ಕಮಗಳೂರು: ನಕಾರಾತ್ಮಕವಾದ ನಡವಳಿಕೆಯಲ್ಲಿ ಅಪಪ್ರಚಾರದ ಮೂಲಕ ಮತ ಕೇಳುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ನಗರದ ಪಾಂಚಜನ್ಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಶ್ರಯ ಸಮಿತಿ ಅಧ್ಯಕ್ಷ ಮುತ್ತಯ್ಯ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಯುವಕರನ್ನು ಬರಮಾಡಿಕೊಂಡು ನಂತರ ಅವರು ಮಾತನಾಡಿದರು.
ನಿಷ್ಠೆ, ಪ್ರಾಮಾಣಿಕತೆಯಿಂದ ಪಕ್ಷಕ್ಕೆ ದುಡಿದರೆ ನಾಯಕತ್ವದ ಗುಣ ತಾನಾಗಿಯೇ ಬರುತ್ತದೆ. ನಾಯಕತ್ವ ಇದ್ದರೆ ಅಧಿಕಾರ ಅದನ್ನು ಹಿಂಬಾಲಿಸುತ್ತದೆ ಈ ಸಂಬಂಧದಲ್ಲಿ ಸ್ವಾರ್ಥ ಮತ್ತು ದ್ವೇಷದ ರಾಜಕಾರಣ ಬಿಟ್ಟು ಬಡವರ ಕಷ್ಟ, ಸುಖಗಳಿಗೆ ಸ್ಪಂದಿಸಿದರೆ ಜನಸಾಮಾನ್ಯರ ಪ್ರೀತಿಗಳಿಸಿ ಗುರಿ ತಲುಪಲು ಸಾಧ್ಯ ಎಂದರು.