ದೇವಸ್ಥಾನಗಳು ಸಂಸ್ಕೃತಿ ರಕ್ಷಣೆಯ ಕೇಂದ್ರವಾಗಲಿ
ಹೊಸನಗರ: ದೇವಸ್ಥಾನಗಳು ಜನರಲ್ಲಿ ಸಂಸ್ಕೃತಿ ಅರಿವು ಮೂಡಿಸಬೇಕು ಮತ್ತು ಸಂಸ್ಕೃತಿ ರಕ್ಷಣೆಯ ಕೇಂದ್ರಗಳಾಗಬೇಕು ಎಂದು ಮೈಸೂರು ರಾಮಕೃಷ್ಣ ವಿದ್ಯಾಶಾಲೆಯ ಮುಖ್ಯಸ್ಥ ಸ್ವಾಮಿ ಸತ್ಯಾನಂದ ಮಹಾರಾಜ್ ಹೇಳಿದರು.
ಕಾರಣಗಿರಿ ಸಿದ್ದಿವಿನಾಯಕ ದೇಗುಲದಲ್ಲಿ ರಾಷ್ಟ್ರೋತ್ಥಾನ ಬಳಗದಿಂದ ಆಯೋಜಿಸಲಾಗಿದ್ದ 21ನೇ ವರ್ಷದ ಸಹಸ್ರ ಸತ್ಯನಾರಾಯಣ ಪೂಜೆಯ ಧರ್ಮ ಜಾಗರಣ ಸಭೆಯಲ್ಲಿ ಮಾತನಾಡಿದರು.
ದೇವಸ್ಥಾನಗಳು ಆಯಾ ಪ್ರದೇಶಗಳ ಸಾಂಸ್ಕೃತಿಕ ಕೇಂದ್ರಗಳಾಗಿದ್ದು, ಅವು ಸಮುದಾಯವನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ. ಜನರ ಭಕ್ತಿ, ನಂಬಿಕೆಗಳಿಗೆ ವಂಚನೆಯಾಗದಂತೆ ದೇವಸ್ಥಾನಗಳು ರೂಪುಗೊಳ್ಳಬೇಕು ಎಂದರು.
ಜಾಗೃತಿ ಅರ್ಥಪೂರ್ಣ: ಪಶ್ಚಿಮಘಟ್ಟ ಕಾರ್ಯಾಪಡೆ ಅಧ್ಯಕ್ಷ ಅನಂತಹೆಗಡೆ ಅಶೀಸರ, ದೇವಸ್ಥಾನಗಳಲ್ಲಿ ವಿವಿಧ ಧಾರ್ಮಿಕ ಆಚರಣೆ ಜೊತೆಗೆ ಸಾಹಿತ್ಯ ಸಂಸ್ಕೃತಿ ಉತ್ಸವ ಆಯೋಜಿಸುತ್ತಿರುವ ರಾಷ್ಟ್ರೋತ್ಥಾನ ಬಳಗ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಜನರಲ್ಲಿ ಜಾಗೃತಿ ಉಂಟು ಮಾಡುವ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣ ಎಂದರು.
ಆರ್ಎಸ್ಎಸ್ ದಕ್ಷಿಣಪ್ರಾಂತ್ ಘೋಷ್ ಪ್ರಮುಖ್ ನಾಗರಾಜ್, ಸಾಮೂಹಿಕ ಕಾರ್ಯಕ್ರಮಗಳಿಂದ ಸಮೋಹದಲ್ಲಿ ಶಕ್ತಿ ಬರುತ್ತದೆ. ಪ್ರತಿ ವ್ಯಕ್ತಿಗಳ ಸಂಘಟನೆಯಿಂದ ಸಜ್ಜನಶಕ್ತಿ ರೂಪುಗೊಂಡರೆ ದೇಶಕ್ಕೆ ಲಾಭ ಎಂದರು.
ಈ ಸಂದರ್ಭದಲ್ಲಿ ವೈದಿಕ ವಿದ್ವಾಂಸ ಶಿವರಾಮ ಉಡುಪ, ನಾಟಿವೈದ್ಯೆ ಅಗಸರಕೊಪ್ಪ ಈರಮ್ಮರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಾಕೆಟ್ ದಿನಚರಿ ಬಿಡುಗಡೆಗೊಳಿಸಲಾಯಿತು. ಹಾದಿಗಲ್ಲು ಲಕ್ಷ್ಮಿನಾರಾಯಣರಾವ್ ಸತ್ಯನಾರಾಯಣ ಕಥೆಯನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಹನಿಯರವಿ, ಬಾಲಚಂದ್ರ ಹೆದ್ಲಿ, ಕೆ.ಎಸ್. ವಿನಾಯಕ, ವಿ.ಎನ್. ಸುಬ್ರಹ್ಮಣ್ಯ, ಹಲಸಿನಕಟ್ಟೆ ರಮೇಶ ಬಳಗದ ಪ್ರಮುಖರು, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.