ಪ್ರಣವ ಲಿಂಗೇಶ್ವರ ದೇವಸ್ಥಾನದ ಬಳಿ ಪ್ರಾಚ್ಯವಸ್ತು ಇಲಾಖೆ ಉತ್ಖನನ
ಶಿರಾಳಕೊಪ್ಪ: ಮಯೂರವರ್ಮನ ರಾಜಧಾನಿ, ಹಲವಾರು ಇತಿಹಾಸಗಳನ್ನು ಗರ್ಭದಲ್ಲಿ ಇಟ್ಟಕೊಂಡಿರುವ ಇತಿಹಾಸ ಪ್ರಸಿದ್ಧ ತಾಳಗುಂದ ಪ್ರಣವ ಲಿಂಗೇಶ್ವರ ದೇವಸ್ಥಾನದ ಬಳಿ ಪ್ರಾಚ್ಯವಸ್ತು ಇಲಾಖೆ ಉತ್ಖನನ ಕಾರ್ಯ ಕೈಗೊಂಡಿದೆ.
ಕಳೆದ ಕೆಲ ದಿನಗಳಿಂದ ಇಲಾಖೆ ಕೈಗೊಂಡಿರುವ ಉತ್ಖನನದಲ್ಲಿ ಹೊಯ್ಸಳ ಕಾಲದಲ್ಲಿನ ಇಟ್ಟಿಗೆ ಮಡಿಕೆ, ಹಂಚು ದೊರೆತು ಆಳಕ್ಕೆ ಹೋದಂತೆ ಹಲವು ತಾಮ್ರಪತ್ರ ಹಾಗು 12 ಬಂಗಾರದ ನಾಣ್ಯಗಳು ದೊರೆತು ಶಾಸನವೂ ದೊರೆತಿದೆ.
ದೊರೆತಿರುವ ತಾಮ್ರ ಪತ್ರಗಳು ಕಳಚೂರರ ಆಡಳಿತ ಕಾಲದವು ಎಂದು ಗುರುತಿಸಲಾಗಿದೆ. ಸಿಕ್ಕಿರುವ ಐದು ತಾಮ್ರ ಪತ್ರದಲ್ಲಿ ರಾಜಮುದ್ರೆ ಹಾಗೂ ಬಸವನ ವಿಗ್ರಹವಿದೆ. ಶಾಸನವು ದೇವನಾಗರಿ ಲಿಪಿಯಲ್ಲಿದೆ. ತಾಮ್ರದ ಶಾಸನದಲ್ಲಿ ವೈದಿಕ ಶಾಸ್ತ್ರದಲ್ಲಿ ನೈಪುಣ್ಯತೆ ಹೊಂದಿದ ಬ್ರಾಹ್ಮಣರಿಗೆ ತಾಳಗುಂದ ಪ್ರದೇಶದಲ್ಲಿ ಭೂಪ್ರದೇಶವನ್ನು ದಾನ ಮಾಡಿರುವ ಉಲ್ಲೇಖವಿದೆ. ಹಾಗೆಯೇ ಆಗಿನ ಕಳಚೂರರ ಕಾಲದ ಸಂಕಮ ಮಾರ್ಚ ಎಂಬ ರಾಜ ಕೊಟ್ಟಿರುವ ಉಲ್ಲೇಖವಿದೆ.
ಬಂಗಾರದ ನಾಣ್ಯಗಳು ಗಂಗರ ಕಾಲದ್ದಾಗಿವೆ. 4 ಗ್ರಾಂ ತೂಕದ ನಾಣ್ಯ (679-726)ಕಾಲದ್ದು ಎನ್ನಲಾಗಿದೆ. ಗಂಗರ ಅರಸ ಶಿವಮಾರನ ಕಾಲದ್ದು ಎಂದು ತಿಳಿದಿದೆ. ಇಂತಹ ನಾಣ್ಯಗಳು ರಾಜ್ಯದಲ್ಲಿ ಈ ಬಾಗದಲ್ಲಿ ದೊರೆತಿರುವುದು ಅಪರೂಪ ಹಾಗೂ ಇದೇ ಮೊದಲು ಎಂದು ಪ್ರಾಚ್ಯವಸ್ತು ಇಲಾಖೆಯ ಬೆಂಗಳೂರ ವಲಯ ಅಧಿಕಾರಿ ನಂಬಿರಾಜನ್ ತಿಳಿಸಿದ್ದಾರೆ.
ಇತಿಹಾಸಪ್ರಸಿದ್ಧ ದೇವಾಲಯ: ಏಕ ಶಿಲೆಯಲ್ಲಿ ಇರುವ ಪ್ರಣವ ಲಿಂಗೇಶ್ವರ ದೇವಾಲಯ ಬಹಳ ಪುರಾತನವಾದದ್ದು. ಇದು ಎರಡನೇ ಶತಮಾನದಲ್ಲಿ ಇದ್ದ ಶಾತವಾಹನರ ಕಾಲದ ಅತ್ಯಂತ ಪುರಾತನ ಶಿವ ದೇವಾಲಯ ಎಂಬ ಪ್ರತೀತಿ ಇದೆ. ಈ ಸ್ಥಳ ಮಯೂರವರ್ಮನ ಜನ್ಮಸ್ಥಳವೆಂದು ಕರೆಯಲ್ಪಡುತ್ತಿದೆ. ಈ ಭಾಗದಲ್ಲಿರುವ ಕೆರೆ ಮೊದಲ ಕೆರೆ ಎಂಬ ಹೆಗ್ಗಳಿಕೆ ಹೊಂದಿದೆ.