ಸರ್ಕಾರ ಕೋಮಾದಲ್ಲಿದೆ: ಬಿಎಸ್ವೈ ಆಕ್ರೋಶ
ಶಿವಮೊಗ್ಗ: ರಾಜ್ಯ ಸರ್ಕಾರ ಜನರ ಪಾಲಿಗೆ ಬದುಕಿದೆ ಎಂದು ನನಗನಿಸುತ್ತಿಲ್ಲ ಎಂದು ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸರ್ಕಾರದ ಕೋಮಾದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಒಂದು ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ ಸರ್ಕಾರಕ್ಕೆ ಅದನ್ನು ಖರ್ಚು ಮಾಡಲು ಆಗಿಲ್ಲ. ಈ ವರೆಗೆ ಖರ್ಚು ಮಾಡಿದ್ದು ಶೇ.47ರಷ್ಟು ಮಾತ್ರ. ಇನ್ನು ನೀತಿ ಸಂಹಿತೆ ಜಾರಿಯಾಗಿದ್ದು, ನಂತರ ವಿಧಾನಸಭೆ ಚುನಾವಣೆ ಬರಲಿದ್ದು, ಖರ್ಚು ಮಾಡುವುದಕ್ಕೆ ಆಗುವುದಿಲ್ಲ. ಮುಂಚಿತವಾಗಿ ಹಣ ಬಿಡುಗಡೆ ಮಾಡಲು ಆಗದ ಸರ್ಕಾರ ಕೋಮಾದಲ್ಲಿದೆ ಎಂದು ಟೀಕಿಸಿದರು.
ಕಾವೇರಿ ನಿರ್ಲಕ್ಷ್ಯ: ನಮ್ಮವರಿಗೇ ಕುಡಿಯಲು ನೀರು ಇಲ್ಲದಾಗ ಕೆಆರ್ಎಸ್ನಿಂದ ನೀರು ಬಿಡಬಾರದು ಎಂದು ಒತ್ತಾಯಿಸಿ ನಾನು ಪಾದಯಾತ್ರೆ ಹಮ್ಮಿಕೊಂಡಿದ್ದನ್ನು ಹಲವರು ಟೀಕಿಸಿದರು. ಮುಖ್ಯಮಂತ್ರಿ-ಉಪಮುಖ್ಯಮಂತ್ರಿಗಳು ಒಮ್ಮೆ ಮೈಸೂರು, ಮಂಡ್ಯಕ್ಕೆ ಹೋಗಿ ನೋಡಿದರೆ ಅವರಿಗೆ ನಿಜಸ್ಥಿತಿ ಗೊತ್ತಾಗುತ್ತದೆ. ನೋಟಿಫಿಕೇಶನ್ ಹೊರಡಿಸುವುದಕ್ಕೂ, ತಪ್ಪಿಸವುದಕ್ಕೂ ಇವರಿಗೆ ಆಗಲಿಲ್ಲ ಎಂದು ಯಡಿಯೂರಪ್ಪ ಟೀಕಿಸಿದರು.
ಅತ್ತ ಜಯಲಲಿತ ನೋಟಿಫಿಕೇಶನ್ ಹೊರಡಿಸಿದ ಕಾರಣ ವಿಜಯೋತ್ಸವ ಆಚರಿಸುತ್ತಿದ್ದಾರೆ. ಇನ್ನು ಯಾವತ್ತೂ ತಮಗೆ ನೀರು ಹರಿಯುವುದು ತಪ್ಪುವುದಿಲ್ಲ ಎಂದು ಅವರಿಗೆ ಗೊತ್ತಾಗಿದೆ. ಆದರೆ ಇತ್ತ ನಮ್ಮ ಮುಖ್ಯಮಂತ್ರಿಗಳು ಪ್ರಧಾನಿಯವರ ಬಳಿ ಹೋಗಿ ಚರ್ಚಿಸುವುದಕ್ಕೆ ಆಗಲಿಲ್ಲ. ರಾಜ್ಯದ ಸಂಸದರೂ ಸುಮ್ಮನಿದ್ದಾರೆ. ಪ್ರಧಾನಿಯವರೊಂದಿಗೆ ಮಾತನಾಡಿ ಎಂದರೆ ಸಭೆಯನ್ನೇ ಬಾಯ್ಕಾಟ್ ಮಾಡಿ ಬರ್ತಾರೆ ಎಂದು ಅಸಮಾಧಾನ ತೋರಿದರು.