9ರಿಂದ ಕ್ರಿಕೆಟ್ ಪಂದ್ಯ
ಶಿವಮೊಗ್ಗ: ನೇಚರ್ ಕ್ರಿಕೆಟ್ ಅಸೋಸಿಯೇಷನ್ ಮಾರ್ಚ್ 9 ಮತ್ತು 10 ರಂದು ನಗರದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸುವ ಆಸಕ್ತಿ ಇರುವ ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಮೊದಲನೇ ಬಹುಮಾನ 75 ಸಾವಿರ, ದ್ವಿತೀಯ 25 ಸಾವಿರ ಹಾಗೂ ಪಾರಿತೋಷಕ ನೀಡಲಾಗುವುದು ಎಂದು ಅಸೋಸಿಯೇಷನ್ ತಿಳಿಸಿದೆ. ವಿವರಗಳಿಗಾಗಿ- 9900689811.
ಜೈಲು ಸಂದರ್ಶನ ಮಂಡಳಿ ಸಭೆ
ಶಿವಮೊಗ್ಗ: ಜಿಲ್ಲಾ ಕೇಂದ್ರ ಕಾರಾಗೃಹ ಆವರಣದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜೈಲು ಸಂದರ್ಶನ ಮಂಡಳಿಯ ಸಭೆ ಬುಧವಾರ ಬೆಳಗ್ಗೆ ನಡೆಯಿತು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಆರ್.ಎಂ. ಶೆಟ್ಟರ್, ಜಿಲ್ಲಾಧಿಕಾರಿ ಬನ್ಸಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್, ಕಾರಾಗೃಹ ಅಧೀಕ್ಷಕ ಶೇಷಮೂರ್ತಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ನಂಜೇಶಯ್ಯ, ಮೆಗ್ಗಾನ್ ಆಸ್ಪತ್ರೆ ಸರ್ಜನ್ ಡಾ. ಲೇಪಾಕ್ಷಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು ಚರ್ಚೆ ನಡೆಸಿದರು.
ಇಲ್ಲಿನ ಕುಡಿವ ನೀರಿನ ವ್ಯವಸ್ಥೆ, ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳಿಗೆ ತಕ್ಷಣವೇ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಜೈಲ್ ವಾರ್ಡ್ ಮೇಲ್ದರ್ಜೆಗೇರಿಸಿ ನವೀಕರಣ ಮಾಡಲು ನಿರ್ಧರಿಸಲಾಯಿತು. ಈ ವಾರ್ಡ್‌ನಲ್ಲಿ ಸೂಕ್ತ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.