ಕುಡಿವ ನೀರಿಗಾಗಿ ಪ್ರತಿಭಟನೆ
ಶಿಕಾರಿಪುರ: ತಾಲೂಕಿನ ಈಸೂರು ಗ್ರಾಮದ ಜನತೆ ಇದೀಗ ಕುಡಿವ ನೀರಿಗಾಗಿ ಪ್ರತಿಭಟಿಸುವ ಪರಿಸ್ಥಿತಿ ತಲುಪಿದ್ದಾರೆ.
ಕುಡಿವ ನೀರಿನ ಅವ್ಯವಸ್ಥೆ ಬಗ್ಗೆ ಗ್ರಾಮಸ್ಥರು ತಾಲೂಕು ಆಡಳಿತದ ಗಮನ ಸೆಳೆಯಲು ಪ್ರತಿಭಟಿಸಿ ತಮ್ಮ ಅಳಲನ್ನು ಮಂಗಳವಾರ ವ್ಯಕ್ತಪಡಿಸಿದರು. ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂಭಾಗ ಖಾಲಿ ಕೊಡದೊಂದಿಗೆ ಪ್ರತಿಭಟಿಸಿದ ಗ್ರಾಮಸ್ಥರು, ಗ್ರಾಮದ ಬನಶಂಕರಿ ಬೀದಿಯಲ್ಲಿ ಕುಡಿವ ನೀರಿನ ಸಮಸ್ಯೆ ಹೆಚ್ಚಾಗಿದೆ. ಸಾರ್ವಜನಿಕ ನಲ್ಲಿಗಳ ಅವಶ್ಯಕತೆಯಿದೆ.
ಈ ಬಗ್ಗೆ ಹಲವು ಬಾರಿ ಪಂಚಾಯತಿ ಗಮನ ಸೆಳೆದರೂ ಸೂಕ್ತ ಪರಿಹಾರ ವ್ಯವಸ್ಥೆ ಕಲ್ಪಿಸುವಲ್ಲಿ ಪಂಚಾಯತಿ ವಿಫಲವಾಗಿದೆ ಎಂದುದೂರಿದರು.
ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಅನಿವಾರ್ಯವಾದ ಕುಡಿವ ನೀರಿನ ಸಮಸ್ಯೆಯಿಂದಾಗಿ ಗ್ರಾಮಸ್ಥರು ನಿತ್ಯ ದೂರದ ಸ್ಥಳಗಳಿಗೆ ತೆರಳಿ ನೀರು ಸಂಗ್ರಹಿಸಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಬನಶಂಕರಿ ಬೀದಿಗೆ ಸರಬರಾಜು ಕಲ್ಪಿಸುವ ಪೈಪ್ಲೈನ್ ದೋಷದಿಂದಾಗಿ ಅಪರೂಪಕ್ಕೆ ಬರುವ ನೀರನ್ನು ಕನಿಷ್ಠ 6 ಅಡಿ ಆಳದ ಗುಂಡಿಯ ಮೂಲಕ ಸಂಗ್ರಹಿಸಬೇಕಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡ ಎಂದರು.
ಮಾರಕ ರೋಗದ ಅಪಾಯ: ಅಲ್ಪಪ್ರಮಾಣದ ನೀರು ಸರಬರಾಜು ಸಂದರ್ಭದಲ್ಲಿ ಗುಂಡಿಯಲ್ಲಿನ ಹುಳುಗಳು ಹರಿದುಬರುತ್ತಿದೆ.
ಇದರಿಂದಾಗಿ ಕಾಲರಾ ಮತ್ತಿತರ ಸಂಕ್ರಾಮಿಕ ಮಾರಕ ರೋಗಗಳು ಉದ್ಬವಿಸುವ ಅಪಾಯ ಎದುರಾಗಿದೆ.
ಗ್ರಾಮದಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಬನಶಂಕರಿ ಬೀದಿಯಲ್ಲಿ ಕಡಿಮೆ ನಲ್ಲಿ ಸಂಪರ್ಕಗಳಿದ್ದು ಈ ಕೂಡಲೇ ನೂತನ ಕೊಳವೆಬಾವಿಯ ಮೂಲಕ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಅವರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಲ್ಲಿ ಮನವಿ ಸಲ್ಲಿಸಿದರು.
ಸಮಸ್ಯೆ ಶೀಘ್ರ ಪರಿಹರಿಸದೆ ನಿರ್ಲಕ್ಷ್ಯ ವಹಿಸಿದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.
ಗ್ರಾಮದ ಮುಖಂಡ ಮಧು ಹುಲ್ಮಾರ್, ರೇವಣಪ್ಪ, ನಟರಾಜ್, ಹುಚ್ರಾಯಪ್ಪ, ನವೀನ, ದಿನೇಶ್,ನಾಗರಾಜ್, ಭಾಗ್ಯ, ಚಂದ್ರಕಲಾ, ಉಷಾ, ರೇಣುಕಾ, ರೇವತಿ, ಶಾರದಮ್ಮ, ಪ್ರಿಯಾ, ಸುನೀತಾ, ಗೀತಾ, ನಂದಿನಿ, ನಿವೇದಿತಾ, ವೇದಾವತಿ, ಮಿಥಿಲಾ, ರೇಖಾ ಮತ್ತಿತರರು ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಹಾಜರಿದ್ದರು.