ಅಧಿಕಾರಿಗಳಿಗೆ ಪುರುಸೊತ್ತಿಲ್ಲ: ಸಮಸ್ಯೆಗೆ ಪರಿಹಾರವಿಲ್ಲ
ಶಿವಮೊಗ್ಗ: ಜಿಲ್ಲೆಯಲ್ಲಿ ಸಾರಿಗೆ ಅದಾಲತ್, ಸಾರಿಗೆ ಪ್ರಾಧಿಕಾರದ ಸಭೆ ನಿಗದಿತ ಸಮಯದಲ್ಲಿ ನಡೆಯದ ಕಾರಣದಿಂದ ಸಾರ್ವಜನಿಕರ ಅಹವಾಲುಗಳ ದೊಡ್ಡ ಮೂಟೆಯೇ ಸೃಷ್ಟಿಯಾಗಿದೆ.
ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿ ಅಹವಾಲು ಆಲಿಸುವುದು, ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಅದಾಲತ್, ಸಾರಿಗೆ ಪ್ರಾಧಿಕಾರದ ಸಭೆಯ ಮುಖ್ಯ ಉದ್ದೇಶ. ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೇತೃತ್ವದಲ್ಲಿ ಸಾರಿಗೆ ಅದಾಲತ್ ನಡೆಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಬೇಕು ಎಂಬ ನಿಯಮವಿದೆ, ಆದರೆ ಅನುಷ್ಠಾನಕ್ಕೆ ಬರುತ್ತಿಲ್ಲ.
ಸಭೆ ಮುಂದೂಡಿಕೆ: ಮೂರು ತಿಂಗಳಿಗೊಮ್ಮೆ ಸಭೆ ನಡೆಯಬೇಕು, ಅದರಂತೆ ಜಿಲ್ಲೆಯ ಸಾರಿಗೆ ಇಲಾಖೆ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡುತ್ತಾ ಬಂದಿದೆ. ನಿಗದಿತ ದಿನಾಂಕದಂತೆ ಸಾರಿಗೆ ಅದಾಲತ್ ಹಾಗೂ ಪ್ರಾಧಿಕಾರದ ಸಭೆ ನಡೆಯಲಿದ್ದು, ಸಾರಿಗೆ ಇಲಾಖೆಗೆ ಸಂಬಂಧಪಟ್ಟ ಅಹವಾಲು, ಸಮಸ್ಯೆಗಳಿದ್ದರೆ ಸಭೆಗೆ ಸೂಕ್ತ ದಾಖಲೆಗಳೊಂದಿಗೆ ಆಗಮಿಸುವಂತೆ ಸೂಚಿಸಲಾಗುತ್ತದೆ. ನಿಯಮದಂತೆ ಸಭೆ ನಡೆಯುವ 15 ದಿನದ ಮುನ್ನ ಸಾರ್ವಜನಿಕ ಮಾಹಿತಿ ನೀಡಬೇಕಾಗುತ್ತದೆ.
ಶಿವಮೊಗ್ಗದಲ್ಲಿ ಆಗುತ್ತಿರುವುದೂ ಅದೇ, ಸಭೆ ನಡೆಯುತ್ತದೆಂದು ಅಧಿಕಾರಿಗಳು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುತ್ತಾರೆ. ಸುದ್ದಿ ಪ್ರಕಟವೂ ಗೊಳ್ಳುತ್ತದೆ. ಆದರೆ, ಕೆಲವೇ ದಿನಗಳಲ್ಲಿ ಸಭೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ, ಮುಂದಿನ ಸಭೆಯ ದಿನಾಂಕ ತಿಳಿಸಲಾಗುವುದೆಂದು ಸ್ಪಷ್ಟೀಕರಣ ಬಿಡುಗಡೆಯಾಗುತ್ತದೆ. ಹೀಗೆ ಕಣ್ಣಾಮುಚ್ಚಾಲೆ ಆಟ ನಡೆದೇ ಇದೆ. ಕಳೆದ ಮೂರು ಸಭೆಗಳು ನಡೆದಿಲ್ಲ. ಈ ತಿಂಗಳಾಂತ್ಯಕ್ಕೆ ನಡೆಯಬೇಕಾಗಿದ್ದ ನಾಲ್ಕನೆ ಸಭೆಯೂ ನಡೆಯುವುದಿಲ್ಲ ಎಂಬ ಮಾಹಿತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ.
ಏಕೆ ರದ್ದಾಗುತ್ತದೆ: ಸಭೆಯ ಅಧ್ಯಕ್ಷರಾಗಿ ಜಿಲ್ಲಾಧಿಕಾರಿಯವರೇ ಕಾರ್ಯನಿರ್ವಹಿಸಬೇಕು. ಅವರ ನೇತೃತ್ವದಲ್ಲೇ ಸಭೆ ನಡೆಯುತ್ತದೆ, ಅಹವಾಲು ಸ್ವೀಕರಾವಾಗುತ್ತದೆ. ಜಿಲ್ಲಾ ರಕ್ಷಣಾಧಿಕಾರಿಯವರು ಸಭೆಯ ಸದಸ್ಯರು. ಆರ್ಟಿಓ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ. ಈ ಮೂವರು ಅಧಿಕಾರಿಗಳು ಸಭೆಯಲ್ಲಿರುವುದು ಕಡ್ಡಾಯ.
ಈಗ ಮೂರು ಸಭೆ ಮುಂದೂಡಲ್ಪಟ್ಟಿರುವುದಕ್ಕೆ ಜಿಲ್ಲಾಧಿಕಾರಿಯವರು ಅನಿವಾರ್ಯವಾಗಿ ಬೇರೆ ಸಭೆಗಳಲ್ಲಿ ಪಾಲ್ಗೊಳ್ಳಬೇಕಾಗಿ ಬಂದಿರುವುದು ಕಾರಣ. ಡಿಸಿಯವರು ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳುವುದು ಸೇರಿದಂತೆ ವಿವಿಧ ಕಾರ್ಯಕ್ರಮದಲ್ಲಿ ಅವರು ಕಡ್ಡಾಯವಾಗಿ ಹಾಜರಿರಬೇಕಾಗಿರುವುದರಿಂದ ಸಾರಿಗೆ ಇಲಾಖೆ ಸಭೆಯಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ. ಸಭೆ ನಡೆಯದಿರುವ ಬಗ್ಗೆ ಕಾರಣಗಳೇನಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಸ್ಪಷ್ಟಪಡಿಸುತ್ತಾರೆ.
ಮುಂದಿನ ಸಭೆ ದಿನಾಂಕ ನಿಗದಿಯಾಗಿದೆಯಷ್ಟೇ, ಆದರೆ, ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಆರ್ಟಿಓ ಅವರು ಬೆಂಗಳೂರಿನಲ್ಲಿ ಇಲಾಖೆ ಸಭೆಯಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆ ಇರುವುದರಿಂದ ಮುಂದಿನ ಸಭೆ ಕೂಡ ನಡೆಯದು.
ಸಮಸ್ಯೆಗಳ ಮೂಟೆ: ಸಾರಿಗೆ ಇಲಾಖೆಗೆ ಸಂಬಂಧಪಟ್ಟಂತೆಯೇ ಸುಮಾರು 900 ಪ್ರಕರಣಗಳು ಬಾಕಿ ಇವೆ. ಇವುಗಳ ಇತ್ಯರ್ಥ ಈ ಸಭೆಯ ಮೂಲಕವಾಗಬೇಕಾಗಿದೆ.
ಸಾರಿಗೆ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಹಿಂದಿನ ಅನೇಕ ಪ್ರಕರಣಗಳು ಸೇರಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳ ಪಟ್ಟಿ ಬೆಳೆದಿದೆ. ಸಭೆಯನ್ನು ನಡೆಸಬಾರದೆಂದು ಯಾವುದೇ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ.
15 ದಿನ ಮುಂಚಿತವಾಗಿ ಸಭೆ ದಿನಾಂಕ ನಿಗದಿಯಾಗುತ್ತದೆ. ನಂತರ ಅತಿ ಮುಖ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಬರುವುದರಿಂದ ಅಧಿಕಾರಿಗಳ ಉಪಸ್ಥಿತಿ ಕಷ್ಟವಾಗುತ್ತಿದೆ ಎಂದು ವಿವರಿಸುತ್ತಾರೆ.
ಏನಾದೀತು: ಸಭೆಗಳು ನಿಯಮಿತವಾಗಿ ನಡೆಯದ ಕಾರಣ ಸಾರ್ವಜನಿಕರ ಸಮಸ್ಯೆಗಳು ಪರಿಹಾರವಾಗದು. ಸಾರಿಗೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು, ವ್ಯಕ್ತಿಗಳ ಪ್ರಕರಣಗಳು ಹಾಗೇ ಉಳಿದು ಅವರ ವೈಯಕ್ತಿಕ ವ್ಯವಹಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲದಿಲ್ಲ. ಹಾಗೆಯೇ ಏಕಾಏಕಿ ದೊಡ್ಡ ಸಂಖ್ಯೆಯ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ದೊಡ್ಡ ಹೊಣೆಗಾರಿಕೆಯೂ ಜವಾಬ್ದಾರಿಯುತ ಅಧಿಕಾರಿಗಳ ಮೇಲೆ ಬೀಳಲಿದೆ.
ಗ್ರಾಮೀಣ ಸಾರಿಗೆ ಆರಂಭಕ್ಕೆ ಸಾರ್ವಜನಿಕರ ಬೇಡಿಕೆ, ಸಾರಿಗೆ ಸೇವೆಯಲ್ಲಿನ ಕುಂದುಕೊರತೆಗಳು, ಖಾಸಗಿ ಅಥವಾ ಸರ್ಕಾರಿ ಬಸ್ ಸೇವೆಯಲ್ಲಿನ ಲೋಪದೋಷಗಳು, ಖಾಸಗಿ ಬಸ್ಗಳ ನಡುವಿನ ಪೈಪೋಟಿಯಿಂದ ಉಂಟಾದ ವಿವಾದ ಇತ್ಯರ್ಥ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಈ ಸಭೆ ಉತ್ತರ ಕಂಡುಕೊಡಬೇಕಾಗುತ್ತದೆ.
ಸದ್ಯ ಅದಾಲತ್, ಪ್ರಾಧಿಕಾರದ ಸಭೆ ನಿಯಮಿತವಾಗಿ ನಡೆಯದ ಕಾರಣದಿಂದಾಗಿ ಇಲಾಖೆಗೆ ಸಂಬಂಧಪಟ್ಟಂತೆ ಸಣ್ಣಪುಟ್ಟ ಸಮಸ್ಯೆಗಳನ್ನು ನಾವೇ ಇತ್ಯರ್ಥಪಡಿಸಿಕೊಡುತ್ತಿದ್ದೇವೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಹೇಳುತ್ತಾರೆ.
ಅಧಿಕಾರಿಗಳ ಪುರುಸೊತ್ತಿಲ್ಲದ ಕಾರಣ ಸಾರಿಗೆ ಕ್ಷೇತ್ರದ ಸಮಸ್ಯೆ, ಅಹವಾಲುಗಳ ಪಟ್ಟಿ ದೊಡ್ಡದಾಗಿ ಬೆಳೆಯುತ್ತಲೇ ಇದೆ.